ಸಾಂದರ್ಭಿಕ ಚಿತ್ರ 
ನ್ಯೂಸ್

ಹಿಂಸೆ ಕೊಡುವ ಗಂಡನನ್ನು ಮನೆಯಿಂದ ಹೊರಹಾಕಬಹುದೆ? ಕಾನೂನಲ್ಲಿ ಏನಿದೆ ಮೇಡಂ?

ನಮ್ಮ ತಾಯಿಯ ಹೆಸರಿನಲ್ಲಿ ಒಂದು ಮನೆ ಇದೆ. ನನ್ನ ತಂದೆಯವರು ನಮ್ಮ ತಾಯಿಯನ್ನೂ ಇಬ್ಬರು ಮಕ್ಕಳನ್ನೂ ಹೊರ ಹಾಕಿದ್ದಾರೆ. ಕೆಳಗಿನ ಮನೆಯಲ್ಲಿ ತಾವು ಒಬ್ಬರೇ ಇದ್ದು ಮೇಲಿನ ಮನೆಯನ್ನು ಬಾಡಿಗೆಗೆ ಕೊಟ್ಟು , ತಾನೊಬ್ಬನೇ ತಿನ್ನುತ್ತಿದ್ದಾರೆ. ನಮ್ಮ ತಾಯಿಗೆ ಅವರಿಂದ ವಿಪರೀತ ಕಿರುಕುಳ.

ಅವರ ಜೊತೆಗೆ ಇರಲು ಇಷ್ಟವೂ ಇಲ್ಲ. ಈಗ ಮನೆ ಬಿಟ್ಟು ಕೊಡು ಎಂದರೆ ಪ್ರಾಣ ತೆಗೆಯುವುದಾಗಿ ಹೆದರಿಸುತ್ತಿದ್ದಾರೆ. ನಮ್ಮ ತಾಯಿಗೆ ಮಕ್ಕಳ ಮನೆಯಲ್ಲಿ ಇರಲು ಇಷ್ಟವಿಲ್ಲ. ತನ್ನ ಮನೆಯಲ್ಲಿ ತಾನು ಬಾಡಿಗೆ ಹಣದಿಂದ ಇರಬೇಕೆಂದು ಆಸೆ. ಅವರನ್ನು ಹೊರಹಾಕಬಹುದೆ? ಈಗ ಏನು ಮಾಡಬೇಕು ಎಂದು ತಿಳಿಸಿ.

ಉತ್ತರ: ನಿಮ್ಮ ತಾಯಿ ಹೆದರಬೇಕಾಗಿಲ್ಲ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾಯ್ದೆಯ ಕೆಳಗೆ ಪ್ರಕರಣ ದಾಖಲಿಸಲು ಹೇಳಿ. ಈ ಪ್ರಕರಣವನ್ನು ಡಿ.ವಿ ಕೇಸ್‌ ಎಂದು ಸಾಮಾನ್ಯಭಾಷೆಯಲ್ಲಿ ಹೇಳುತ್ತಾರೆ. ಈ ಕೇಸಿಗೆ ಕೋರ್ಟು ಫೀಸೂ , ಖರ್ಚೂ ಅತೀ ಕಡಿಮೆ ಇರುತ್ತದೆ.

ನಿಮ್ಮ ತಾಯಿಯ ಮನೆಯಿಂದ ನಿಮ್ಮ ತಂದೆ ಹೊರಗೆ ಹೋಗಬೇಕು ಎನ್ನುವ ಆದೇಶವನ್ನು ನ್ಯಾಯಾಲಯ ಕೊಡುವಂತೆ ಅರ್ಜಿ ಹಾಕಲು ತಿಳಿಸಿ. ನಿಮ್ಮ ತಾಯಿಗೆ, ನಿಮ್ಮ ತಂದೆಯಿಂದ ತೊಂದರೆ ಆಗದಂತೆ ರಕ್ಷಣೆಯ ಆದೇಶವನ್ನೂ ಕೊಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ. ಖಂಡಿತ ಎಲ್ಲವೂ ಸರಿಹೋಗುತ್ತದೆ.