ನ್ಯೂಸ್

ನನ್ನ ಪತ್ನಿ ಕ್ರಿಕೆಟ್‌ನಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದಾಳೆ, ಅವಳನ್ನು ಅರೆಸ್ಟ್‌ ಮಾಡಿ ಎಂದು ಪತಿಯ ದೂರು

ಲಖನೌ: ಇತ್ತೀಚೆಗಷ್ಟೇ ಟಿ20 ಟೂರ್ನಿಯಲ್ಲಿ ಭಾರತದ ವಿರುದ್ಧದ ಪಾಕಿಸ್ತಾನ ಜಯ ಸಾಧಿಸಿದಾಗ ಪಾಕಿಸ್ತಾನದಲ್ಲಿ ಸಂಭ್ರಮ ಮನೆಮಾಡಿದ್ದಲ್ಲದೇ ಭಾರತದಲ್ಲಿನ ಕೆಲವು ಪಾಕ್‌ ಪ್ರೇಮಿಗಳೂ ಸಂಭ್ರಮ ಆಚರಿಸಿದ್ದರು. ಕೆಲವರು ಜಾಲತಾಣದಲ್ಲಿಯೂ ಪಾಕ್‌ ಪರವಾಗಿ ಶೇರ್‌ ಮಾಡಿಕೊಂಡಿದ್ದರು.

ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ಕೂಡ ನಡೆದಿದ್ದು, ಅದೀಗ ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ವಿರುದ್ಧ ಪತಿಯೇ ದೂರು ದಾಖಲು ಮಾಡಿದ್ದು, ಪಂದ್ಯದಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ಪರವಾಗಿ ಸಂಭ್ರಮಾಚರಣೆ ಮಾಡಿರುವ ಪತ್ನಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದಿದ್ದಾನೆ!

ರಾಂಪುರದ ಅಜಿಮ್‌ ನಗರದಲ್ಲಿರುವ ಇಶಾನ್‌ ಮಿಯಾ ಈಗ ದೂರು ದಾಖಲು ಮಾಡಿದ್ದಾರೆ. ನನ್ನ ಹೆಂಡತಿ ಆಕೆಯ ಸಂಬಂಧಿಗಳು ಪಟಾಕಿ ಸಿಡಿಸಿದ್ದಾರೆ. ಮಾತ್ರವಲ್ಲದೇ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ಗಳನ್ನು ಹಾಕಿಕೊಂಡು ಸಂಭ್ರಮಿಸಿದ್ದಾರೆ. ಭಾರತೀಯನಾಗಿರುವ ನನಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದು ಎಲ್ಲರ ವಿರುದ್ಧ ದೂರು ದಾಖಲು ಮಾಡಿದ್ದಾನೆ.

ವ್ಯಕ್ತಿ ದೂರು ಆಧರಿಸಿದ ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಅಂಕಿತ್‌ ಮಿತ್ತಲ್‌ ತಿಳಿಸಿದ್ದಾರೆ. ಅಂದಹಾಗೆ, ಪತಿ ಇಷ್ಟೊಂದು ಕಠೋರ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಕಾರಣವಿದೆ. ಈ ದಂಪತಿ ಈಗ ಒಟ್ಟಿಗೇ ಇಲ್ಲ. ಮದುವೆಯಾದ ಸ್ವಲ್ಪ ದಿನಗಳಲ್ಲೇ ಬೇರೆಯಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.