ನ್ಯೂಸ್

ದುಡಿಯುವ ಸಾಮರ್ಥ್ಯವಿದ್ದರೆ ಜೀವನಾಂಶ ಬೇಕೋ- ಬೇಡವೋ: ಹೈಕೋರ್ಟ್​ ಏನು ಹೇಳಿದೆ ನೋಡಿ

ನವದೆಹಲಿ: ವಿಚ್ಛೇದನ, ಜೀವನಾಂಶಕ್ಕೆ ಸಂಬಂಧಿಸಿದಂತೆ ಹಲವಾರು ತೀರ್ಪುಗಳು ಹೊರಬರುತ್ತಲೇ ಇರುತ್ತವೆ. ಒಂದೊಂದು ಪ್ರಕರಣಗಳ ಆಧಾರದ ಮೇಲೆ ಒಂದೊಂದು ರೀತಿಯ ತೀರ್ಪುಗಳನ್ನು ಒಂದೊಂದು ಕೋರ್ಟ್​ಗಳು ನೀಡುತ್ತವೆ.

ಇದೀಗ ದೆಹಲಿಯ ಕೋರ್ಟ್​ ಒಂದು ಜೀವನಾಂಶಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿದೆ. ಸಾಮಾನ್ಯವಾಗಿ ವಿಚ್ಛೇದಿತ ಮಹಿಳೆ ದುಡಿಯುತ್ತಿದ್ದರೆ ಅಥವಾ ವಿಚ್ಛೇದನ ನಂತರ ಮಕ್ಕಳನ್ನು ಆಕೆ ಸಾಕದೇ ಹೋದ ಸಂದರ್ಭದಲ್ಲಿ, ಕೋರ್ಟ್​ಗಳು ಗಂಡನಿಗೆ ಜೀವನಾಂಶ ನೀಡುವುದರಿಂದ ರಿಲೀಫ್​ ನೀಡುತ್ತವೆ. ಇವು ಎಲ್ಲಾ ಪ್ರಕರಣಗಳಲ್ಲಿ ಅಲ್ಲದಿದ್ದರೂ ಬಹುತೇಕ ಸಮಯದಲ್ಲಿ ಇಂಥ ತೀರ್ಪುಗಳು ವಿಚ್ಛೇದಿತ ಪತಿಯ ಪರವಾಗಿ ಬರುವುದುಂಟು.

ಆದರೆ ಪತ್ನಿಗೆ ದುಡಿಯುವ ಸಾಮರ್ಥ್ಯ ಇದೆ ಎಂದು ಹೇಳಿದ ಮಾತ್ರಕ್ಕೆ ಆಕೆಗೆ ಜೀವನಾಂಶ ನೀಡುವುದಿಲ್ಲ ಎನ್ನುವುದಾಗಲೀ ಅಥವಾ ಕೋರ್ಟ್​ಗಳು ಇದಾಗಲೇ ನೀಡಿರುವ ಆದೇಶದಷ್ಟು ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎನ್ನುವುದಾಗಲೀ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್​ ಹೇಳಿದೆ.

ಹೆಂಡತಿಗೆ ದುಡಿಯುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ, ಜೀವನಾಂಶ ಕಡಿತ ಮಾಡಲು ಸಮರ್ಪಕ ಕಾರಣವಲ್ಲ. ದುಡಿಯುವ ಸಾಮರ್ಥ್ಯ ಮತ್ತು ನಿಜವಾದ ದುಡಿಮೆ ಎರಡು ಭಿನ್ನ ವಿಷಯಗಳು ಎಂಬುದಾಗಿ ನ್ಯಾಯಮೂರ್ತಿ ಮನೋಜ್ ಕುಮಾರ್ ಅವರ ನೇತೃತ್ವದ ಪೀಠ ಹೇಳಿದೆ.

ಕೌಟುಂಬಿಕ ಕೋರ್ಟ್​ ವಿಚ್ಛೇದಿತ ಪತ್ನಿಗೆ 50 ಸಾವಿರ ಜೀವನಾಂಶ ನೀಡಬೇಕು ಎಂದು ಹೇಳಿದ್ದನ್ನು ಪ್ರಶ್ನಿಸಿ ಆಕೆಯ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್​, ಹೆಂಡತಿಗೆ ದುಡಿಯುವ ಸಾಮರ್ಥ್ಯ ಇದೆ ಎಂಬುದು ಕುಟುಂಬ ನ್ಯಾಯಾಲಯವು ನಿಗದಿ ಮಾಡಿರುವ ಜೀವನಾಂಶವನ್ನು ಕಡಿತ ಮಾಡಲು ಸಮರ್ಪಕ ಕಾರಣ ಆಗುವುದಿಲ್ಲ ಎಂಬು ತಿಳಿಸಿದೆ.

ತಮ್ಮ ಪತ್ನಿ ಸ್ವತಂತ್ರವಾಗಿ ವಕೀಲಿಕೆ ಮಾಡಿಕೊಂಡಿದ್ದಾರೆ. ಆಕೆಗೆ ದುಡಿಯುವ ಸಾಮರ್ಥ್ಯ ಇದೆ ಎಂದಿದ್ದ ವಿಚ್ಛೇದಿತ ಪತಿ, ಹೀಗಿದ್ದರೂ ಕೌಟುಂಬಿಕ ಕೋರ್ಟ್​ 50 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಹೇಳಿದ್ದು ಸರಿಯಲ್ಲ ಎಂದು ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದರು. ವಕೀಲಿ ವೃತ್ತಿ ಕೈಗೊಳ್ಳುವ ಅರ್ಹತೆ ತಮಗೆ ಇದೆ. ಆದರೆ, ಸದ್ಯಕ್ಕೆ ತಾವು ಹೆತ್ತವರನ್ನೇ ಪೂರ್ಣವಾಗಿ ಅವಲಂಬಿಸಿರುವುದಾಗಿ ಪತ್ನಿ ತಿಳಿಸಿದ್ದರು.

ಅರ್ಜಿದಾರ ಪತಿ ತಿಂಗಳಿಗೆ 1.68 ಲಕ್ಷ ರೂಪಾಯಿ ದುಡಿಯುತ್ತಿರುವುದೂ ಮಾತ್ರವಲ್ಲದೇ ಹೆಂಡತಿಗೆ ಕೆಲಸ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಕೇವಲ ಸಾಮರ್ಥ್ಯದ ಆಧಾರದ ಮೇಲೆ ಜೀವನಾಂಶ ರದ್ದು ಮಾಡುವುದಾಗಲೀ, ಕಡಿತಗೊಳಿಸುವುದಾಗಿ ಮಾಡಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಅರ್ಜಿದಾರ ವ್ಯಕ್ತಿಯ ತಿಂಗಳ ಸಂಬಳದ ಮೊತ್ತವನ್ನು ಮೂರು ಭಾಗ ಮಾಡಿ ಒಂದು ಭಾಗವನ್ನು ಹೆಂಡತಿಗೆ ಜೀವನಾಂಶವಾಗಿ ನೀಡಲು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್​ ಎತ್ತಿಹಿಡಿದಿದೆ.