ಲಂಡನ್: ಸಣ್ಣಗಿದ್ದವರಿಗೆ ದಪ್ಪಗಾಗಬೇಕು, ದಪ್ಪ ಇದ್ದವರಿಗೆ ತೆಳ್ಳಗಾಗಬೇಕು, ಹುಡುಗರಿಗೆ ಸಿಕ್ಸ್ ಪ್ಯಾಕ್ ಬೇಕು... ಹೀಗೆ ಜಿಮ್ ಮೊರೆ ಹೋಗುವವರಿಗೇನೂ ಕಮ್ಮಿ ಇಲ್ಲ.
ಆದರೆ ತಮ್ಮ ಗುರಿಯನ್ನು ಸಾಧಿಸಲು ವಿಪರೀತವಾಗಿ ವರ್ಕ್‌ಔಟ್ ಮಾಡುವವರಿಗೆ ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ. ಅಗತ್ಯಕ್ಕಿಂತ ಹೆಚ್ಚಾಗಿ ಜಿಮ್‌ನಲ್ಲಿ ಕಸರತ್ತು, ವರ್ಕ್‌ಔಟ್ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆ. 23 ವರ್ಷದ ಕಿಯಾನಾ ಅಲ್ವಾರೆಜ್ ಅತಿಯಾಗಿ ವರ್ಕ್‌ಔಟ್ ಮಾಡಿ ಅಂದದ ದೇಹ ಪಡೆದರೂ ಕೊನೆಗೆ ಏನು ಸಮಸ್ಯೆಯಾಗಿದೆ ಎಂಬುದನ್ನು ಇದೀಗ ಬಿಚ್ಚಿಟ್ಟಿದ್ದಾರೆ.
ತಮ್ಮಂಥ ಸಮಸ್ಯೆ ಇನ್ನಾರಿಗೂ ಬರಬಾರದು ಎನ್ನುವ ಕಾರಣಕ್ಕೆ, ಅವರು ತಮ್ಮ ಕಥೆಯನ್ನು ಹಂಚಿಕೊಂಡಿದ್ದು, ಅತಿಯಾಗಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ಭಯಾನಕತೆಯನ್ನು ಹೇಳಿದ್ದಾರೆ.
’ಸುಂದರ ದೇಹ ಪಡೆಯಲು ನಾನು ಜಿಮ್ ಮೊರೆ ಹೋಗಿದ್ದೆ. ಏನೇ ಆದರೂ ಪರವಾಗಿಲ್ಲ, ನನ್ನ ದೇಹವನ್ನು ಆದಷ್ಟು ಸುಂದರವಾಗಿ ಮಾಡಿಕೊಳ್ಳಬೇಕು ಎಂದು ಇಚ್ಛಿಸಿದೆ. ಆದ್ದರಿಂದ ಅತಿಯಾಗಿ ವರ್ಕ್‌ಔಟ್ ಮಾಡಿದೆ. ಇದರ ಪರಿಣಾಮವಾಗಿ ಇದೀಗ ಸಾವು- ಬದುಕಿನ ನಡುವೆ ಹೋರಾಟ ಮಾಡುತ್ತಿದ್ದೇನೆ. ಅಪರೂಪ ಎನಿಸಿರುವ ಹಾಗೂ ಈ ರೀತಿ ಅತಿಯಾಗಿ ವರ್ಕ್‌ಔಟ್ ಮಾಡುವವರಿಗೆ ಉಂಟಾಗುವ ಉಸಿರಾಟದ ಸಮಸ್ಯೆಯಿಂದ ನಾನೀಗ ಬಳಲುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಅತಿಯಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ನನಗೆ ರಾಬ್ಡೋಮಿಯೊಲಿಸಿಸ್ ಎಂಬ ಸಮಸ್ಯೆ ಉಂಟಾಗಿದೆ. ಇದು ಅಪರೂಪದ ಮತ್ತು ಮಾರಣಾಂತಿಕ ಸಿಂಡ್ರೋಮ್ ಆಗಿದೆ. ಇದರಿಂದ ನನ್ನ ದೇಹದ ಸ್ನಾಯುಗಳೆಲ್ಲಾ ಪುಡಿಪುಡಿಯಾಗಿರುವ ಅನುಭವ ಹೊಂದುತ್ತಿದ್ದೇನೆ. ಇದರಿಂದ ನನ್ನ ಮೂತ್ರಪಿಂಡಗಳಿಗೂ ಸಮಸ್ಯೆ ಉಂಟಾಗುತ್ತಿದೆ ಎಂದಿದ್ದಾರೆ.
ಕ್ರಿಯಾಟೈನ್ ಕೈನೇಸ್ ಮಟ್ಟವು ಸಾಮಾನ್ಯ ಮಟ್ಟಕ್ಕಿಂತ 40 ಪಟ್ಟು ಹೆಚ್ಚಾಗಿದೆ. ಇದು ಹೆಚ್ಚಾಗಿ ಕ್ರೀಡಾಪಟು ಹಾಗೂ ಮಿಲಿಟರಿಯಲ್ಲಿ ಕೆಲಸ ಮಾಡುವವರಲ್ಲಿ ಕಾಣಿಸುತ್ತದೆ ಎಂದು ಕಿಯಾನಾ ಹೇಳಿದ್ದಾರೆ. ಆದ್ದರಿಂದ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ದಯವಿಟ್ಟು ಯಾರೂ ಈ ರೀತಿ ಏಕಾಏಕಿಯಾಗಿ ವಿಪರೀತಕ್ಕೆ ಹೋಗಬೇಡಿ ಎಂದು ಹೇಳಿದ್ದಾರೆ. ಪ್ರತಿದಿನವೂ ಎಷ್ಟು ಬೇಕೋ, ನಿಮ್ಮ ದೇಹ ಎಷ್ಟನ್ನು ಒಪ್ಪಿಕೊಳ್ಳುತ್ತದೆಯೋ ಅಷ್ಟೇ ವರ್ಕ್‌ಔಟ್ ಮಾಡಿ, ಅತಿಯಾಗಿ ಮಾಡಬೇಡಿ ಎಂದ ಅವರು ಕಿವಿಮಾತು ಹೇಳಿದ್ದಾರೆ.