ಲಖನೌ: ಕಾಂಗ್ರೆಸ್ ವಿರುದ್ಧ ಬಂಡಾಯ ಘೋಷಿಸಿದ್ದ 23 ಮುಖಂಡರಲ್ಲಿ ಒಬ್ಬರಾಗಿರುವ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಕಾಂಗ್ರೆಸ್ಗೆ ಗುಡ್ಬೈ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಡುವೆ ರಾಜಕೀಯಕ್ಕೆ ಸಂಬಂಧಿಸಿ ಮಾತುಕತೆ ನಡೆದ ಬಳಿಕ ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ. ಇದರಿಂದಾಗಿ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
ಮೇ.16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ. ಇದೀಗ ರಾಜ್ಯಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆಂದು ಕಪಿಲ್ ಸಿಬಲ್ ಹೇಳಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾನು ಯಾವಾಗಲೂ ದೇಶದಲ್ಲಿ ಸ್ವತಂತ್ರ ಧ್ವನಿಯಾಗಲು ಬಯಸುತ್ತಿದ್ದೆ. ಪ್ರತಿಪಕ್ಷದಲ್ಲಿ ಇರುವಾಗ, ನಾವು ಮೋದಿ ಸರ್ಕಾರವನ್ನು ವಿರೋಧಿಸಲು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ವಕೀಲರಾಗಿಯೂ ಕಪಿಲ್ ಸಿಬಲ್ ಭಾರಿ ಖ್ಯಾತಿ ಹೊಂದಿದವರು. ಅಖಿಲೇಶ್ ಯಾದವ್ ಅವರಿಗೆ ಪಕ್ಷದ ಚಿಹ್ನೆಯಾಗಿ ಸೈಕಲ್ ನೀಡಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ವಾದಿಸಿದ್ದ ಕಪಿಲ್ ಅವರು, ಅದರಲ್ಲಿ ಗೆಲುವು ಸಾಧಿಸಿದ್ದರು. ಪಕ್ಷವನ್ನು ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅಖಿಲೇಶ್ ಯಾದವ್, ದೇಶದಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳ ಬಗ್ಗೆ ಕಪಿಲ್ ಅವರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.