ಸಾಂದರ್ಭಿಕ ಚಿತ್ರ 
ನ್ಯೂಸ್

ಮೊಬೈಲ್‌ ಗೀಳಿನಿಂದಾಗಿ ಫ್ರೆಂಡ್ಸೇ ಇಲ್ಲ... ಇನ್ಯಾಕೆ ಈ ಜೀವನ? ಡೆತ್‌ನೋಟ್‌ ಬರೆದಿಟ್ಟು ಬಾಲಕಿ ಆತ್ಮಹತ್ಯೆ

ಕಲ್ಲಂಬಲಮ್‌ (ಕೇರಳ): ಮೊಬೈಲ್‌ ದಾಸರಾಗುತ್ತಿರುವ ಮಕ್ಕಳು ತಮ್ಮ ಸ್ನೇಹಿತರನ್ನು ಕಳೆದುಕೊಳ್ಳುತ್ತಿರುವ ಆಘಾತಕಾರಿ ಘಟನೆ ನಡೆಯುತ್ತಲೇ ಇದೆ. ಪಾಲಕರ ಮಾತನ್ನೂ ಕೇಳಿದೇ, ಆಟೋಟ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳದೇ ಸದಾ ಮೊಬೈಲ್‌ ನೋಡುತ್ತಾ ಕುಳಿತುಕೊಳ್ಳುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದ್ದರೆ, ಇತ್ತ ಪಾಲಕರು ಕೂಡ ಮಕ್ಕಳ ಕೈಯಲ್ಲಿ ಸ್ಮಾರ್ಟ್‌ಫೋನ್‌ ಕೊಟ್ಟು ತನ್ನ ಕರ್ತವ್ಯದಿಂದ ನುಣುಚಿಕೊಳ್ಳುತ್ತಿದ್ದಾರೆ.

ಇದೀಗ ಅಂಥದ್ದೇ ಒಂದು ಆಘಾತಕಾರಿ ಘಟನೆಯಲ್ಲಿ 16 ವರ್ಷ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಕಲ್ಲಂಬಲಮ್‌ನಲ್ಲಿ ನಡೆದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಸದಾ ಕೊರಿಯನ್ ಬ್ಯಾಂಡ್‌ಗಳ ಯೂಟ್ಯೂಬ್ ವಿಡಿಯೋ ನೋಡುತ್ತಿದ್ದಳು. ಮೊದಮೊದಲಿಗೆ ಈಕೆಗೆ ಇವೆಲ್ಲಾ ಖುಷಿಕೊಟ್ಟಿದೆ. ಆದರೆ ಈ ಹುಚ್ಚು ಅತಿರೇಕಕ್ಕೆ ಹೋಗಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆ. ಸದಾ ಮೊಬೈಲ್‌ ವ್ಯಸನಿಯಾಗಿರುವ ಈಕೆಗೆ ಯಾರೂ ಸ್ನೇಹಿತರು ಇರಲಿಲ್ಲ, ಇರುವವರೆಲ್ಲರನ್ನೂ ಈಕೆ ಇದೇ ಚಟದಿಂದಾಗಿ ದೂರ ಸರಿಸಿದ್ದಳು.

ಒಂದು ಹಂತದಲ್ಲಿ ಬಾಲಕಿಗೆ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದಿದೆ. ಆದರೆ ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಅಂದುಕೊಂಡ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿರುವ ಬಾಲಕಿ, ‘ನನಗೆ ಯಾರೂ ಸ್ನೇಹಿತರು ಇಲ್ಲ. ಇದಕ್ಕೆ ನನ್ನ ಮೊಬೈಲ್‌ ಗೀಳೇ ಕಾರಣವಾಗಿದೆ. ಮೊಬೈಲ್​​ನಲ್ಲಿ ಕೊರಿಯನ್ ಬ್ಯಾಂಡ್‌ಗಳ ಯೂಟ್ಯೂಬ್ ವಿಡಿಯೋ ನೋಡಿ ನೋಡಿ ಇದಕ್ಕೆ ಅಂಟಿಕೊಂಡು ಬಿಟ್ಟೆ. ಸ್ನೇಹಿತರನ್ನು ಕಳೆದುಕೊಂಡೆ. ಪರೀಕ್ಷೆಯಲ್ಲಿಯೂ ಕಡಿಮೆ ಅಂಕ ಬಂದಿವೆ. ಇನ್ನು ಬದುಕಿದ್ದು ಪ್ರಯೋಜನ ಇಲ್ಲ’ ಎಂದು ಉಲ್ಲೇಖಿಸಿದ್ದಾಳೆ.

10ನೇ ತರಗತಿವರೆಗೆ ಬಾಲಕಿ ಉತ್ತಮ ವಿದ್ಯಾರ್ಥಿಯಾಗಿದ್ದಳು. 10ನೇ ತರಗತಿಯ ನಂತರ ಕೈಗೆ ಫೋನ್‌ ಸಿಕ್ಕ ತಕ್ಷಣ ಎಲ್ಲವೂ ಬದಲಾಗಿ ಹೋಯಿತು. ಅಲ್ಲಿಂದ ಅದರ ವ್ಯಸನಿಯಾದಳು’ ಎಂದು ಪಾಲಕರು ಹೇಳಿದ್ದಾರೆ. ಕೋಣೆಯೊಳಗೆ ಹೋಗಿದ್ದ ಬಾಲಕಿ ಸುಮಾರು ಹೊತ್ತು ಕಳೆದರೂ ಹೊರ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.