ನ್ಯೂಸ್

ಅಮೆರಿಕ ಚುನಾವಣೆ- ಜಾರ್ಜಿಯಾದಲ್ಲಿ ಕೊನೆ ಕ್ಷಣದಲ್ಲಿ ರೋಚಕ ತಿರುವು

ವಾಷಿಂಗ್ಟನ್: ಅಮೆರಿಕ ಚುನಾವಣೆ ಕ್ಷಣ ಕ್ಷಣಕ್ಕೂ ಕುತೂಹಲ ತಾಳುತ್ತಲೇ ಸಾಗಿದೆ. ಇದಾಗಲೇ ಹಲವಾರು ಕಡೆಗಳಲ್ಲಿ ಗೆದ್ದು ಅಧ್ಯಕ್ಷಗಿರಿಗೆ ತೀರಾ ಸನೀಹದಲ್ಲಿರುವ ಜೋ ಬಿಡನ್‌ ಹಾಗೂ ಸೋಲಿನ ಹಾದಿಯಲ್ಲಿದ್ದರೂ ಮೋಸದಾಟ ನಡೆಯುತ್ತಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸುತ್ತಿರುವ ಡೊನಾಲ್ಡ್‌ ಟ್ರಂಪ್‌ ನಡುವೆ ರೋಚಕ ತಿರುವುಗಳು ನಡೆಯುತ್ತಲೇ ಇವೆ.

ಜಾರ್ಜಿಯಾದಲ್ಲಿ ಡೆಮೋಕ್ರಾಟಿಕ್ ಪಕ್ಷದ ಜೋ ಬಿಡನ್‌ ಅವರಿಗಿಂತ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭಾರಿ ಮುನ್ನಡೆ ಸಾಧಿಸಿದ್ದರು. ಈ ಮೂಲಕ ಟ್ರಂಪ್‌ ಈ ಕ್ಷೇತ್ರದಲ್ಲಿ ಗೆಲ್ಲುವ ಉತ್ಸಾಹ ಹೊಂದಿದ್ದರು. ಆದರೆ ವಿಚಿತ್ರ ಹಾಗೂ ಕುತೂಹಲದ ಬೆಳವಣಿಗೆಯಲ್ಲಿ ಕೊನೆಯ ಹಂತದಲ್ಲಿ ಇಲ್ಲಿ ಕೂಡ ಜೋ ಬಿಡನ್‌ ಗೆಲುವು ಸಾಧಿಸಿದ್ದಾರೆ! ಡೊನಾಲ್ಡ್ ಟ್ರಂಪ್ ವಿರುದ್ಧ ಜಯ ಗಳಿಸಿದ್ದಾರೆ.

ಶೇ.99ರಷ್ಟು ಮತ ಎಣಿಕೆ ಮುಗಿದಾಗಲೂ ಟ್ರಂಪ್ 2 ಸಾವಿರ ಮತಗಳ ಮುನ್ನಡೆಯಲ್ಲಿದ್ದರು. ಆದರೆ ಕೊನೆ ಕ್ಷಣದಲ್ಲಿ ರೋಚಕ ತಿರುವು ಪಡೆದುಕೊಂಡಿದೆ. ಈ ಮೂಲಕ 1992ರ ನಂತರ ಇದೇ ಮೊದಲ ಬಾರಿಗೆ ಈ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಡೆಮಾಕ್ರಟಿಕ್‌ ಅಭ್ಯರ್ಥಿ ಎನಿಸಿದ್ದಾರೆ ಜೋ ಬಿಡನ್‌.

ಪ್ರಮುಖ ರಾಜ್ಯಗಳಾದ ಮಿಚಿಗನ್ ಮತ್ತು ವಿಸ್ಕೊನ್ಸಿನ್‌ಗಳಲ್ಲಿ ಜೋ ಬಿಡನ್‌ ಗೆಲುವು ಸಾಧಿಸಿದ್ದರು. ಎಲ್ಲರ ಚಿತ್ತ ಜಾರ್ಜಿಯಾದತ್ತ ಇತ್ತು. ಆದರೆ ಅಲ್ಲಿಯೂ ಟ್ರಂಪ್‌ ಭಾರಿ ಮುಖಭಂಗ ಅನುಭವಿಸುವಂತಾಗಿದೆ.

ಈ ಮೂಲಕ ಜೋ ಬಿಡನ್‌ ಅವರ ಅಧ್ಯಕ್ಷ ಪಟ್ಟಕ್ಕೆ ಹಾದಿ ಸುಗಮವಾಗಿದೆ ಎಂದೇ ವರ್ಣಿಸಲಾಗುತ್ತಿದೆ. ಆದರೂ ಮೇಲ್ನೋಟಕ್ಕೆ ಕಾಣಿಸುವಷ್ಟು ಚುನಾವಣಾ ಫಲಿತಾಂಶ ಸುಲಭವಾಗಿಲ್ಲ ಎಂದೇ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಜೊ ಬೈಡನ್, ಯಾರು ಕೂಡ ನಮ್ಮಿಂದ ಪ್ರಜಾಪ್ರಭುತ್ವವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಂದು, ಮುಂದು, ಎಂದೆಂದೂ. ಅಮೆರಿಕ ಸಾಕಷ್ಟು ಮುಂದೆ ಬಂದಿದೆ. ಹಲವು ಹೋರಾಟಗಳನ್ನು ಮಾಡಿದೆ. ಅದರಿಂದ ಗೆದ್ದು ಬಂದಿದೆ ಕೂಡ ಎಂದು ಹೇಳಿದ್ದರು. ಇದೀಗ ಜಾರ್ಜಿಯಾದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಟ್ರಂಪ್‌ ಅವರಿಗಿಂತ ಬಿಡನ್‌ ಅವರು 917 ಮತಗಳಿಂದ ಗೆಲುವು ಸಾಧಿಸಿದ್ದಾರೆ.