ಕೆನ್ಬೆರ್ರಾ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಸಾರ್ವತ್ರಿಕ ಚುನಾವಣೆಗಳು ಇದೇ 21ರಂದು ಮುಗಿದಿವೆ. ಲಿಬರಲ್ ಪಕ್ಷವನ್ನು ಸೋಲಿಸಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದೆ. ಪ್ರಧಾನಿಯಾಗಿದ್ದ ಸ್ಕಾಟ್ ಮಾರಿಸನ್ ಜಾಗದಲ್ಲಿ ಕಾರ್ಮಿಕ ನಾಯಕ ಆಂಥೋನಿ ಅಲ್ಬನೀಸ್ ಪ್ರಧಾನಿಯಾಗಲಿದ್ದಾರೆ. ಇವೆಲ್ಲಾ ಸರಿ... ಆದರೆ ಇಂಟೆರೆಸ್ಟಿಂಗ್ ವಿಷಯವೊಂದು ಚುನಾವಣೆಯಲ್ಲಿ ನಡೆದಿದೆ. ಅದೇನೆಂದರೆ ಚುನಾವಣೆಯಲ್ಲಿ ಅನೇಕ ಮಂದಿ ಒಳ ಉಡುಪಿನಲ್ಲಿ ಬಂದು ಮತವನ್ನು ಚಲಾಯಿಸಿ ಹೋದದ್ದು!
ಹಾಗೆಂದು ಇದೇನು ಸರ್ಕಾರದ ವಿರುದ್ಧ ಪ್ರತಿಭಟನೆ ಅಂದುಕೊಂಡರೆ ತಪ್ಪು. ಹಾಗಿದ್ದರೆ ಇವರೆಲ್ಲಾ ಇಷ್ಟು ಖುಷಿಯಲ್ಲಿ ಅಂಡರ್ವೇರ್ನಲ್ಲಿ ಬಂದು ಮತ ಚಲಾಯಿಸಿದ್ದು ಏಕೆಂದರೆ, ಉಚಿತ ಒಳ ಉಡುಪು ಪಡೆಯಲು! ಅರ್ಥಾತ್, ಒಳ ಉಡುಪುಗಳನ್ನು ಮಾತ್ರ ಧರಿಸಿ ಮತ ಚಲಾಯಿಸುವ ಯಾರಿಗಾದರೂ ಒಳ ಉಡುಪು ಕಂಪನಿಯು ಉಚಿತ ಒಳ ಉಡುಪುಗಳನ್ನು ನೀಡಿತ್ತು.
ಅಂಡರ್ ಗಾರ್ಮೆಂಟ್ ಕಂಪನಿಯಾಗಿರುವ ಬಝೀ ಸ್ಮಗ್ಲರ್ ಈ ಘೋಷಣೆ ಮಾಡಿತ್ತು. ಇದನ್ನು ಕೇಳಿ ಉಚಿತವಾಗಿ ಅಂಡರ್ವೇರ್ ಪಡೆಯಲು ಈ ವೇಷದಲ್ಲಿ ಸಹಸ್ರಾರು ಪುರುಷರು, ಮಕ್ಕಳು ಬಂದು ಮತ ಚಲಾಯಿಸಿ ಹೋಗಿದ್ದು, ಇದೀಗ ಭಾರಿ ವೈರಲ್ ಆಗಿದೆ. ಒಂದು ಜೊತೆ ಒಳಉಡುಪುಗಳನ್ನು ಉಚಿತವಾಗಿ ಪಡೆಯಲು, ಮತದಾರರು ತಮ್ಮ ಕಂಪನಿಯ ಒಳ ಉಡುಪುಗಳಲ್ಲಿ ಬಂದು ಮತ ಚಲಾಯಿಸಬೇಕು ಮತ್ತು #SmugglersDecide ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ಹಂಚಿಕೊಳ್ಳಬೇಕು ಎಂದು ಬಝೀ ಸ್ಮಗ್ಲರ್ ಹೇಳಿತ್ತು. ಹೀಗೆ ಷರತ್ತಿನಂತೆ ಮತ ಚಲಾಯಿಸಿ ಫೋಟೋ ಶೇರ್ ಮಾಡಿಕೊಂಡವರಿಗೆ ಕಂಪೆನಿ ಉಚಿತವಾಗಿ ಅಂಡರ್ವೇರ್ ಕಳಿಸುತ್ತಿದೆ. ಅಂದಹಾಗೆ ಈ ಬ್ರ್ಯಾಂಡ್ನ ಅಂಡರ್ವೇರ್ಗೆ ಬಹು ದುಬಾರಿ ಬೆಲೆ ಎನ್ನಲಾಗಿದೆ.