ಸಾಂದರ್ಭಿಕ ಚಿತ್ರ 
ನ್ಯೂಸ್

ಹೆಚ್ಚು ‘ಲೈಕ್ಸ್‌’ಗಾಗಿ ಜೀವ ಕಳೆದುಕೊಂಡ ನಾಲ್ವರು ಯುವಕರು! ರೈಲಿಗೆ ಸಿಲುಕಿ ದುರ್ಮರಣ

ಗುರುಗ್ರಾಮ (ನವದೆಹಲಿ): ಸೆಲ್ಫಿ ಹುಚ್ಚು ಅದೆಷ್ಟೋ ಮಂದಿಯ ಪ್ರಾಣ ಕಳೆದಿರುವುದು ಉಂಟು. ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಹೆಚ್ಚೆಚ್ಚು ಲೈಕ್ಸ್‌ ಪಡೆಯುವ ಹುಚ್ಚಾಟದಲ್ಲಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಿರುವವರಿಗೆ ಲೆಕ್ಕವೇ ಇಲ್ಲ.

ಈಗ ಅಂಥದ್ದೇ ಒಂದು ದುರ್ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ. ರೈಲು ಹಳಿಗಳ ಮೇಲೆ ಸೆಲ್ಫಿ ತೆಗೆದು ದುಸ್ಸಾಹಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ದೂರದಿಂದ ರೈಲು ಬರುತ್ತಿರುವಾಗ ರೈಲು ಬರುವುದು ಕಾಣಿಸುವ ಜತೆಗೆ ಸೆಲ್ಫಿ ತೆಗೆದರೆ ಚೆನ್ನಾಗಿ ಬರುತ್ತದೆ ಎಂದು ಹಳಿಯ ಮೇಲೆ ನಿಂತಿದ್ದ ನಾಲ್ವರು ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯ ಸರಾಯ್ ರೋಹಿಲ್ಲಾದಿಂದ ರಾಜಸ್ಥಾನದ ಅಜ್ಮೀರ್‌ಗೆ ಹೋಗುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಗುರುಗ್ರಾಮ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿರುವುದಾಗಿ ಮೂಲಗಳು ಹೇಳಿವೆ.

ಮೃತರನ್ನು ದೇವಿಲಾಲ್ ಕಾಲೋನಿಯ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಮತ್ತು ಯುವರಾಜ್ ಗೋಗಿಯಾ (18) ಎಂದು ಗುರುತಿಸಲಾಗಿದೆ.