ಹೈದರಾಬಾದ್: ಒಬ್ಬನನ್ನು ರಕ್ಷಿಸಲು ಹೋಗಿ ಇಬ್ಬರು ಕಂದಮ್ಮಗಳು ಸೇರಿದಂತೆ ನಾಲ್ವರು ವಿದ್ಯುತ್ ಶಾಕ್ಗೆ ಒಳಗಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ವಿದ್ಯುತ್ ತಗುಲಿ ಮೃತಪಟ್ಟರೆ, ಅಜ್ಜಿಯ ಮನೆಯಲ್ಲಿದ್ದ ಐದು ವರ್ಷದ ಮಗು ಮಾತ್ರ ಬದುಕುಳಿದಿದ್ದು, ಇದೀಗ ಅನಾಥವಾಗಿದೆ.
ಬೀಡಿ ವರ್ಕರ್ಸ್ ಕಾಲೋನಿಯ ನಿವಾಸಿಯಾಗಿರುವ ಆಟೋ ಚಾಲಕ ಅಹಮ್ಮದ್ ಅವರ ಕುಟುಂಬದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಅಹಮ್ಮದ್ (35), ಪತ್ನಿ ಪರ್ವೀನ್ (30), ಮಗಳು ಮಹಿಮ್ (6), ಮತ್ತು ಅದ್ನಾನ್ (3) ಮೃತಪಟ್ಟಿದ್ದಾರೆ. ಅಜ್ಜಿ ಮನೆಗೆ ಹೋಗಿದ್ದ ಫೈಜಾನ್ (5) ಬದುಕುಳಿದಿದ್ದಾನೆ.
ಆಗಿದ್ದೇನು?
ಕಳೆದ ಕೆಲವು ದಿನಗಳಿಂದ ಕಾಮರೆಡ್ಡಿ ಜಿಲ್ಲೆಯಲ್ಲಿ ವರುಣ ಆರ್ಭಟ ಜೋರಾಗಿದೆ. ಅಹಮ್ಮದ್ ಕುಟುಂಬವು ಹುಲ್ಲಿನ ಮನೆಯಲ್ಲಿ ವಾಸವಾಗಿತ್ತು. ಮನೆಯ ಗೋಡೆಗೆ ಕಬ್ಬಿಣದ ತಂತಿ ಕಟ್ಟಲಾಗಿತ್ತು. ಇದರ ಮೇಲೆ ಅವರು ಬಟ್ಟೆ ಒಣಸುತ್ತಿದ್ದರು. ಆದರೆ ಮಳೆಯ ಕಾರಣದಿಂದಾಗಿ ಗೋಡೆ ಒದ್ದೆಯಾಗಿದ್ದು, ಕಬ್ಬಿಣದ ತಂತಿಗೆ ವಿದ್ಯುತ್ ಪ್ರಹರಿಸುತ್ತಿತ್ತು.
ಇದನ್ನು ತಿಳಿಯದ ಪರ್ವೀನ್ ಅವರು ತಂತಿಯ ಮೇಲೆಯೇ ಬಟ್ಟೆ ಒಣಗಿಸಲು ಹೋಗಿದ್ದಾರೆ. ಆಗ ಅವರಿಗೆ ವಿದ್ಯುತ್ ತಗುಲಿದೆ. ಅವರು ಜೋರಾಗಿ ಕಿರುಚಿಕೊಂಡಾಗ ಪತ್ನಿಯನ್ನು ರಕ್ಷಿಸಲು ಅಹಮ್ಮದ್ ಮುಂದಾಗಿದ್ದಾರೆ. ಪತ್ನಿಯನ್ನು ಹಿಡಿದುಕೊಳ್ಳುತ್ತಿದ್ದಂತೆಯೇ ಅವರಿಗೂ ವಿದ್ಯುತ್ ತಗುಲಿಬಿಟ್ಟಿದೆ. ಶಾಲೆಗೆ ರಜೆ ಇದ್ದ ಕಾರಣ ಮಕ್ಕಳು ಮನೆಯಲ್ಲಿಯೇ ಇದ್ದರು. ಅಪ್ಪ-ಅಮ್ಮನಿಗೆ ಏನೋ ಆಯಿತೆಂದು ಹೆದರಿ ಅವರು ಅಪ್ಪ-ಅಮ್ಮನನ್ನು ಹಿಡಿದುಕೊಂಡಿದ್ದಾರೆ. ಆಗ ವಿದ್ಯುತ್ ತಗುಲಿ ಮಕ್ಕಳೂ ಮೃತಪಟ್ಟಿದ್ದಾರೆ!
ಹೀಗೆ ಅಪ್ಪ-ಅಮ್ಮ ಮತ್ತು ಇಬ್ಬರು ಮಕ್ಕಳು ಒಟ್ಟಿಗೇ ಮೃತಪಟ್ಟಿದ್ದಾರೆ. ಇವರ ಕೂಗಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಬಂದು ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ. ನಾಲ್ವರನ್ನೂ ಆಸ್ಪತ್ರೆಗೆ ಸಾಗಿಸಿದರೂ ನಾಲ್ವರೂ ಅದಾಗಲೇ ಮೃತಪಟ್ಟಿದ್ದರು.
ಮೃತರ ಕುಟುಂಬಕ್ಕೆ ಸರ್ಕಾರ 3 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಸಚಿವ ವೇಮುಲ ಪ್ರಶಾಂತ್ ರೆಡ್ಡಿ ತಿಳಿಸಿದ್ದಾರೆ. ಜತೆಗೆ ಅಜ್ಜಿಯ ಮನೆಯಲ್ಲಿ ಇದ್ದು ಪ್ರಾಣ ಉಳಿಸಿಕೊಂಡಿರುವ ಐದು ವರ್ಷದ ಫೈಜಾನ್ನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವರು ಭರವಸೆ ಕೊಟ್ಟಿದ್ದಾರೆ.