ನ್ಯೂಸ್

ಇನ್ಮುಂದೆ ಕಾರಲ್ಲೇ ಹಾರಬಹುದು: ಚೆನ್ನೈನಲ್ಲಿ ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್‌

suchetana

ಚೆನ್ನೈ: ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್ ಚೆನ್ನೈನಲ್ಲಿ ಶುರುವಾಗಲಿದ್ದು, ಕಾರಿನ ಪರಿಕಲ್ಪನೆಯ ಮಾದರಿಯನ್ನು ಪರಿಚಯಿಸಲಾಗಿದೆ. ಇದನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪರಿಶೀಲಿಸಿದ್ದು, ಶೀಘ್ರದಲ್ಲಿ ಇದು ನನಸಾಗಲಿದೆ.

ಚೆನ್ನೈ ಮೂಲದ ಸ್ಟಾರ್ಟಪ್‌ನ ಯುವ ತಂಡದ ಮೂಲಕ, ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರಿನ ಮಾದರಿ ಪರಿಚಯಿಸಿದ್ದು, ಇದನ್ನು ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಟ್ವೀಟ​ರ್‌​ ಬರೆದುಕೊಂಡಿದ್ದಾರೆ. ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್ ಎನಿಸಿಕೊಳ್ಳುತ್ತಿರುವ ಪರಿಕಲ್ಪನೆಯ ಮಾದರಿಯನ್ನು ಪರಿಚಯಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಫ್ಲೈಯಿಂಗ್ ಕಾರನ್ನು ಜನರು, ಸರಕು ಸಾಗಣಿಕೆ ಮತ್ತು ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ. ಇಡೀ ತಂಡಕ್ಕೆ ನನ್ನ ಶುಭಾಶಯಗಳು ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.

ಇದರೊಂದಿಗೆ, ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಹಾಯವಾಗುವ ನಿರೀಕ್ಷೆಯಿದೆ. ಅಲ್ಲದೆ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಈ ಫ್ಲೈಯಿಂಗ್ ಕಾರು ಜನರ ಜೀವವನ್ನು ಉಳಿಸಬಲ್ಲದು ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಫ್ಲೈಯಿಂಗ್ ಕಾರಿನ ವಿಶೇಷತೆ ಎಂದರೆ ಇದು ಜೈವಿಕ ಇಂಧನ ಮತ್ತು ಬ್ಯಾಟರಿ ಮೂಲಕ ಚಲಿಸುವ ಹೈಬ್ರಿಡ್ ಮೋಟಾರ್ ಹೊಂದಿರುತ್ತದೆ. ಹೈಬ್ರಿಡ್ ಕಾರಿನ ತೂಕ 1,100 ಕೆಜಿ ಇದ್ದು, ಇದು ಗರಿಷ್ಠ 1,300 ಕೆಜಿ ತೂಕವನ್ನು ಎತ್ತಬಲ್ಲದಾಗಿದೆ. ಈ ಕಾರನ್ನು ಇಬ್ಬರು ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಗಂಟೆಗೆ 100-120 ಕಿಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.

ಅಕ್ಟೋಬರ್ 5 ರಂದು ಲಂಡನ್‌ನಲ್ಲಿ ನಡೆಯಲಿರುವ ವಿಶ್ವದ ಅತಿದೊಡ್ಡ ಹೆಲಿಟೆಕ್ ಪ್ರದರ್ಶನದಲ್ಲಿ ವಿನತಾ ಏರೋಮೊಬಿಲಿಟಿ ತಂಡವು ತನ್ನ ಮಾದರಿಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ.