ನ್ಯೂಸ್

ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮಾಹಿತಿ ಹ್ಯಾಕಿಂಗ್​: ಐವರು ಚೀನಿಯರು ಅಂದರ್​

suchetana

ವಾಷಿಂಗ್ಟನ್: ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಭಾರತದ ಸುಮಾರು ಒಂದೂವರೆ ಸಾವಿರ ಗಣ್ಯರ ಮಾಹಿತಿಗಳನ್ನು ಚೀನಾ ಸಂಗ್ರಹಿ ಬೇಹುಗಾರಿಕೆ ಮಾಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಇದೀಗ ಚೀನಾದ ಭಾರಿ ವಂಚನೆಯೊಂದು ಬೆಳಕಿಗೆ ಬಂದಿದೆ.

ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಂದ ಧಿಕ್ಕಾರಕ್ಕೆ ಒಳಗಾಗಿರುವ ಈ ಕಮ್ಯುನಿಸ್ಟ್​ ರಾಷ್ಟ್ರ, ಇದೀಗ ವಿಶ್ವಾದ್ಯಂತ ಸರ್ಕಾರಗಳ ಪ್ರಮುಖ ಖಾತೆಗಳಿಗೆ ಕನ್ನ ಹಾಕಿದೆ. ಚೀನಾದ ಹ್ಯಾಕರ್‌ಗಳು ಭಾರತ ಸರ್ಕಾರದ ಏಳು ನೆಟ್‍ವರ್ಕ್‍ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ಕಂಪೆನಿಗಳ ಡೇಟಾಗಳಿಗೆ ಕನ್ನ ಹಾಕಿರುವುದಾಗಿ ತಿಳಿದುಬಂದಿದೆ.

ಈ ಹ್ಯಾಕರ್‌ಗಳು ಸರ್ಕಾರ ಮತ್ತು ಪ್ರತಿಷ್ಠಿತ ಸಂಸ್ಥೆಗಳಿಗೆ ಸಂಬಂಧಪಟ್ಟ ಮಾಹಿತಿಗಳಿಗೆ ಕನ್ನ ಹಾಕಿ ತಮ್ಮ ಅಕ್ರಮ ವೆಬ್‍ಸೈಟ್ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿ ಸಾಕಷ್ಟು ಹಣ ಗಳಿಸಿದ್ದಾರೆ ಎಂದು ಬಯಲಾಗಿದೆ.

ಇದಾಗಲೇ ಅಮೆರಿಕ ಸರ್ಕಾರ, ಕಂಪ್ಯೂಟರ್ ಹ್ಯಾಕಿಂಗ್​ಗೆ ಸಂಬಂಧಿಸಿದಂತೆ ಚೀನಾದ ಐವರು ಪ್ರಜೆಗಳು ಮತ್ತು ಈ ಹ್ಯಾಕರ್​ಗಳಿಗೆ ಸಹಾಯ ಮಾಡಿರುವ ಆರೋಪದ ಮೇಲೆ ಮಲೇಷ್ಯಾದ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ.

ಚೀನಾದ ಐವರು ಹ್ಯಾಕರ್‌ಗಳು ಭಾರತ ಸರ್ಕಾರದ ಏಳು ನೆಟ್‍ವರ್ಕ್‍ಗಳು ಮತ್ತು ವಿಶ್ವದ 100ಕ್ಕೂ ಹೆಚ್ಚು ದೊಡ್ಡ ಸಂಸ್ಥೆಗಳ ದತ್ತಾಂಶ ಮಾಹಿತಿಗೆ ಕನ್ನ ಹಾಕಿದ್ದಾರೆ. ಆಯಾ ದೇಶಗಳಲ್ಲಿನ ಮಹತ್ವದ ಸಾಫ್ಟ್​ವೇರ್​ ಮತ್ತು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ಗೆ ಸಂಬಂಧಿಸಿದ ವಿವಿಧ ವ್ಯವಹಾರಗಳನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಎಂದು ಅಮೆರಿಕ ಉಪ ಅಟಾರ್ನಿ ಜನರಲ್ ಜೆಫ್ರಿ ರೋಸೆನ್ ಹೇಳಿದ್ದಾರೆ.

ಆದರೆ ಇವರ ಜಾಲ ಬಹುದೊಡ್ಡದಿದ್ದು, ಕೆಲವರು ಈಗಾಲೇ ತಪ್ಪಿಸಿಕೊಂಡಿದ್ದಾರೆ. ಅವರನ್ನು ಹಿಡಿಯಲು ತಂತ್ರ ರೂಪಿಸಲಾಗಿದೆ ಎಂದು ರೋಸೆನ್​ ತಿಳಿಸಿದ್ದಾರೆ (ಏಜೆನ್ಸೀಸ್​)