ನ್ಯೂಸ್

ಪಂಚಾಯತ್‌ ಚುನಾವಣೆ ವೇಳೆ ಹಾಲಿ-ಮಾಜಿ ಶಾಸಕರ ರಂಪಾಟ! ಇಬ್ಬರ ಮೇಲೂ ಬಿತ್ತು ಕೇಸ್‌

ವಿಜಯನಗರ: ಹಗರಿಬೊಮ್ಮನ ಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯ ಮತದಾನದ ವೇಳೆ ಕೈ, ಕೈ ಮಿಲಾಯಿಸೋ ಹ‌ಂತಕ್ಕೆ ಕಾದಾಟ ನಡೆಸಿದ್ದ ಹಾಲಿ ಮತ್ತು ಮಾಜಿ ಶಾಸಕರ ವಿರುದ್ಧ ಕೇಸ್‌ ದಾಖಲಾಗಿದೆ.

ಸೋಮವಾರ (ಡಿ.28) ಹಗರಿಬೊಮ್ಮನ ಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ ಮುಗಿದಿದೆ. ಈ ಸಂದರ್ಭದಲ್ಲಿ ಹಾಲಿ ಶಾಸಕ ಭೀಮಾನಾಯ್ಕ ಮತ್ತು ಮಾಜಿ ಶಾಸಕ ನೇಮಿರಾಜ್ ನಾಯ್ಕ ಹಾಗೂ ಅವರ ಬೆಂಬಲಿಗರಿಂದ ಭಾರಿ ಗಲಾಟೆ ನಡೆದಿತ್ತು. ಈ ಗಲಾಟೆ ಕೈ, ಕೈ ಮಿಲಾಯಿಸೋ ಹ‌ಂತಕ್ಕೆ ತಲುಪಿತ್ತು.

ಈ ಹಿನ್ನೆಲೆಯಲ್ಲಿ ಇವರಿಬ್ಬರು ಹಾಗೂ ಇವರ ಬೆಂಬಲಿಗರ ವಿರುದ್ಧ ದೂರು ದಾಖಲು ಮಾಡಲಾಗಿದೆ.

ನಿನ್ನೆ ಪುರಸಭೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ಈ ಗಲಾಟೆ ನಡೆದಿತ್ತು. ಈ ಹಾಲಿ- ಮಾಜಿಗಳ ಬೆಂಬಲಿಗರಷ್ಟೇ ಅಲ್ಲದೇ ಸ್ವತಃ ಇವರಿಬ್ಬರೂ ಮತಗಟ್ಟೆಗೆ ನುಗ್ಗಿದ್ದರು. ಪರಸ್ಪರ ನಿಂದನೆ ಮಾಡಿಕೊಳ್ಳುವ ಮೂಲ ಬೆಂಬಲಿಗರ ಜತೆಗೆ ನೇರ ಕಾದಾಟಕ್ಕೆ ಇಳಿದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಇಬ್ಬರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಗಲಾಟೆ ಪ್ರಕರಣ ದಾಖಲಿಸಿದ್ದಾರೆ.

ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಮಾಹಿತಿ ನೀಡಿದ್ದಾರೆ (ದಿಗ್ವಿಜಯ ನ್ಯೂಸ್‌)