ನ್ಯೂಸ್

ಇ.ಡಿ ತೆಕ್ಕೆಯಿಂದ ಸದ್ಯ ಪಾರಾದ ಸೋನಿಯಾ: ವಿಚಾರಣೆಯಿಂದ ಸಿಕ್ತು ತಾತ್ಕಾಲಿಕ ಮುಕ್ತಿ

ನವದೆಹಲಿ: ಕಾಂಗ್ರೆಸ್‌ ಮುಖವಾಣಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯಲ್ಲಿನ ಅಕ್ರಮ ಹಣ ವರ್ಗಾವಣೆಯಲ್ಲಿ ಸಿಲುಕಿರುವ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್​ ಗಾಂಧಿಯವರಿಗೆ ಇದಾಗಲೇ ಜಾರಿ ನಿರ್ದೇಶನಾಲಯ ವಿಚಾರಣೆಗೆ ನೋಟಿಸ್​ ಜಾರಿ ಮಾಡಿತ್ತು. ರಾಹುಲ್​ ಗಾಂಧಿಯವರನ್ನು ಆರು ದಿನಗಳವರೆಗೆ ವಿಚಾರಣೆ ನಡೆಸಲಾಗಿದ್ದರೆ, ಕರೊನಾ ಕಾರಣದಿಂದ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರು ಆಗಿರಲಿಲ್ಲ.

ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್​ ಜಾರಿ ಮಾಡಿದ್ದ ಮಾರನೆಯ ದಿನವೇ ಸೋನಿಯಾ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ನಿರ್ದೇಶನಾಲಯವು ಅವರ ಹಾಜರಿಗೆ ಮತ್ತೊಮ್ಮೆ ಸೂಚಿಸಿದ ಮರುದಿನ ಕರೊನಾ ಸೋಂಕು ಹೆಚ್ಚಿ ಸೋನಿಯಾ ಆಸ್ಪತ್ರೆ ಸೇರಿದ್ದರು.

ಕಳೆದ ಸೋಮವಾರ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಗುರುವಾರ (ಜೂನ್​ 23) ಅವರ ಖುದ್ದು ಹಾಜರಿಗೆ ಜಾರಿ ನಿರ್ದೇಶನಾಲಯ ನೋಟಿಸ್​ ಜಾರಿ ಮಾಡಿದೆ.

ಆದರೆ ವೈದ್ಯರು ಸಂಪೂರ್ಣವಾಗಿ ಬೆಡ್​ರೆಸ್ಟ್​ ಹೇಳಿದ್ದರಿಂದ ವಿಚಾರಣೆಗೆ ಹಾಜರು ಆಗಲು ಸಾಧ್ಯವಾಗುತ್ತಿಲ್ಲ, ತಮಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಅವರು ಜಾರಿ ನಿರ್ದೇಶನಾಲಯಕ್ಕೆ ಸೋನಿಯಾ ನಿನ್ನೆ (ಬುಧವಾರ) ಮನವಿ ಮಾಡಿಕೊಂಡಿದ್ದರು.

ಈ ಮನವಿಯನ್ನು ಜಾರಿ ನಿರ್ದೇಶನಾಲಯ ಮಾನ್ಯ ಮಾಡಿದೆ. ಅವರಿಗೆ ಹೊಸದಾಗಿ ಸಮನ್ಸ್​ ಜಾರಿ ಮಾಡಿದೆ. ಜುಲೈ ಮಧ್ಯದವರೆಗೆ ಸೋನಿಯಾ ಅವರಿಗೆ ಸಮಯ ನೀಡಲಾಗಿದೆ. ಜುಲೈ ಮಧ್ಯದ ವಾರದಲ್ಲಿ ವಿಚಾರಣೆಗೆ ಹಾಜರು ಇರಬೇಕು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಇ.ಡಿ. ಯಿಂದ ತಾತ್ಕಾಲಿಕ ಮುಕ್ತಿ ಸಿಕ್ಕಂತಾಗಿದೆ.