ಜರ್ಮನಿ: ನಿಮ್ಮ ಮನೆಯಲ್ಲಿ ನಾಯಿ ಸಾಕಿದ್ದೀರಾ? ಅದಕ್ಕೆ ವಾಕಿಂಗ್ ಕರೆದುಕೊಂಡು ಹೋಗುವುದಿಲ್ವಾ? ಹೋದರೂ ಒಂದೇ ಬಾರಿ ಕರೆದುಕೊಂಡು ಹೋಗುವಿರಾ? ಹಾಗಿದ್ದರೆ ನಿಮಗೆ ಇನ್ಮುಂದೆ ಶಿಕ್ಷೆ ಕಾದದ್ದೇ...
ಹಾಗೆಂದು ಭಾರತದ ಪ್ರಜೆಗಳು ಯೋಚನೆ ಮಾಡಬೇಕಿಲ್ಲ. ಏಕೆಂದರೆ ಇಂಥದ್ದೊಂದು ಕಾನೂನು ಜಾರಿಗೆ ಬರಲಿರುವುದು ಜರ್ಮನಿಯಲ್ಲಿ.
ಸಾಕು ನಾಯಿಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕೆಂದು ಜರ್ಮನಿ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ.
ಕೃಷಿ ಸಚಿವೆ ಜೂಲಿಯಾ ಕ್ಲೋಕ್ನರ್ ಈ ಕುರಿತು ಘೋಷಣೆ ಮಾಡಿದ್ದು, ನಾಯಿಗಳಿಗೆ ಪ್ರತಿನಿತ್ಯ ಕನಿಷ್ಠ ಎರಡು ಬಾರಿಯಾದರೂ ಉದ್ಯಾನದಲ್ಲಿ ವಾಕಿಂಗ್ ಅಥವಾ ಜಾಗಿಂಗ್ ಮಾಡಿಸಬೇಕೆಂಬ ಕಾನೂನು ತರುವುದಾಗಿ ಹೇಳಿದ್ದಾರೆ.
ನಾಯಿಗಳನ್ನು ಮನೆಯಲ್ಲಿಯೇ ಕೂಡಿ ಹಾಕುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ಮೇಲೆ ದೌರ್ಜನ್ಯ ಎಸಗಿದಂತಾಗುತ್ತಿದೆ. ಆದ್ದರಿಂದ ಜನರು ಎರಡು ಬಾರಿ ಅವುಗಳನ್ನು ವಾಕಿಂಗ್ ಕರೆದುಕೊಂಡು ಹೋಗುವುದು ಕಡ್ಡಾಯ. ಇಲ್ಲದೇ ಹೋದಲ್ಲಿ ಅಂಥವರಿಗೆ ಶಿಕ್ಷೆ ವಿಧಿಸುವ ಸಂಬಂಧ ಯೋಜನೆ ರೂಪಿಸಲಾಗಿದೆ.
ಒಂದು ವೇಳೆ ಈ ಕಾನೂನನ್ನು ಜರ್ಮನಿಯ ಕೇಂದ್ರ ಸರ್ಕಾರ ಅನುಮೋದಿಸಿದಲ್ಲಿ, ಅಲ್ಲಿನ 16 ಪ್ರಾಂತೀಯ ಸರ್ಕಾರಗಳು ಅದನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಜರ್ಮನಿಯಲ್ಲಿ ಸದ್ಯ 94 ಲಕ್ಷ ಶ್ವಾನಗಳಿವೆ.