ನ್ಯೂಸ್

ಅಬಕಾರಿ ನೀತಿ ಜಾರಿಯಲ್ಲಿ ಭಾರಿ ಗೋಲ್​ಮಾಲ್ ಆರೋಪ​: ಆರು ರಾಜ್ಯಗಳಲ್ಲಿ ಇ.ಡಿ. ದಾಳಿ

ನವದೆಹಲಿ: ಅಬಕಾರಿ ನೀತಿ ಅನುಷ್ಠಾನದಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿ ಆರು ರಾಜ್ಯಗಳ ಪ್ರಮುಖ ನಗರಗಳಲ್ಲಿ ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳ ನಗರಗಳಲ್ಲಿ ದಾಳಿ ನಡೆದಿದ್ದು, ಶೋಧ ಕಾರ್ಯ ಪ್ರಗತಿಯಲ್ಲಿದೆ.

ಕಳೆದ ವರ್ಷ ದೆಹಲಿ ಸರ್ಕಾರ ಮದ್ಯ ಮಾರಾಟಕ್ಕೆ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿಯ ಅಡಿ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಆದರೆ ನಂತರ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸರ್ಕಾರ ಹೊಸ ಅಬಕಾರಿ ನೀತಿ ಜಾರಿಗೆ ತಂದಿತು. ಇದರ ಅಡಿ ಪ್ರತಿ ವಾರ್ಡ್‌ನಲ್ಲಿ ನಾಲ್ಕು ಮದ್ಯದಂಗಡಿ ತೆರೆಯಲು ಅವಕಾಶವಿದೆ. ಈ ನೀತಿಯ ಅನ್ವಯ 468 ಖಾಸಗಿ ಬಾರ್‌ಗಳಿಗೆ ಅನುಮತಿ ನೀಡಲಾಗಿತ್ತು. ಈ ಅನುಮತಿ ನೀಡುವ ಸಮಯದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.

ಈ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ಸಂಬಂಧಿಸಿದ ರಹಸ್ಯ ಕಾರ್ಯಾಚರಣೆಯ ವಿಡಿಯೊವೊಂದನ್ನು ಸೋಮವಾರ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ದಾಳಿ ನಡೆದಿದೆ. ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಹಗರಣದ ಕಿಂಗ್‌ಪಿನ್ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ಭ್ರಷ್ಟಾಚಾರದ ಹುನ್ನಾರ ಬಹಿರಂಗಗೊಳ್ಳುತ್ತಿದೆ, ಶೀಘ್ರವೇ ಅವರ ಕೈಗೆ ಕೋಳ ಬೀಳಲಿದೆ ಎಂದಿದೆ.

ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ನಮೂದಿಸಲಾದ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಪ್ರಸ್ತುತ ಎಎಪಿಯ ಯಾವುದೇ ನಾಯಕನನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿಲ್ಲ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜತೆಗೆ ಈ ದಾಳಿಯು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಒಳಗೊಂಡಿಲ್ಲ ಎಂದು ಖಚಿತಪಡಿಸಿದ್ದಾರೆ.

ಸಿಬಿಐಗೆ ಶಿಫಾರಸು
ದೆಹಲಿ ಸರ್ಕಾರ 2021-22ನೇ ಸಾಲಿನ ಅಬಕಾರಿ ನೀತಿಯಲ್ಲಿ ಅಕ್ರಮದ ಘಾಟು ಬರುತ್ತಿದ್ದಂತೆಯೇ ದೆಹಲಿಯ ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಕಳೆದ ತಿಂಗಳು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಸಚಿವ ಮನೀಶ್ ಸಿಸೋಡಿಯಾ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದರು.

ಇದೇ ಸಂದರ್ಭದಲ್ಲಿ 11 ಅಬಕಾರಿ ಅಧಿಕಾರಿಗಳನ್ನು ಕೂಡ ಅಮಾನತು ಮಾಡಲಾಗಿತ್ತು. ಮದ್ಯದ ಲೈಸೆನ್ಸ್‌ ಪಡೆದುಕೊಂಡವರಿಗೆ ಟೆಂಡರ್‌ ನಂತರ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರು ಅವರು ಸಿಸೋಡಿಯಾ ಅವರ ಸಹಚರರಿಗೆ 5 ಕೋಟಿ ರೂ ಪಾವತಿಸಿದ್ದಾರೆ ಎಂದು ಸಿಬಿಐ 2021-22ರ ಅಬಕಾರಿ ನೀತಿ ರಚನೆ ಮತ್ತು ಅನುಷ್ಠಾನದ ಅಡಿ ಎಫ್‌ಐಆರ್​ ದಾಖಲಿಸಿದೆ. (ಏಜೆನ್ಸೀಸ್​)