ನ್ಯೂಸ್

ಆಸ್ಪತ್ರೆಗೆ ಹೋದರು ದೀಪಿಕಾ, ರಣ್​ವೀರ್​: ಜಾಲತಾಣದ ತುಂಬ ಗುಸುಗುಸು, ಪಿಸುಪಿಸು...!

ಮುಂಬೈ: ಚಿತ್ರ ತಾರೆಯರು ಏನು ಮಾಡಿದರೂ ಅದು ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲಿಯೂ ಅವರು ಮದುವೆಯಾದ ಮೇಲೆ ಅವರ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರುತ್ತದೆ. ಇಬ್ಬರೂ ತಾರಾ ದಂಪತಿಯಾದರಂತೂ ಮುಗಿದೇ ಹೋಯ್ತು.

ಅಂಥದ್ದೇ ಒಂದು ಬಹು ಕುತೂಹಲ ಎನಿಸುವ ಜೋಡಿ ರಣ್‍ವೀರ್ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ. 2018ರ ನವೆಂಬರ್​ 14ರಂದು ಮದುವೆಯಾಗಿರುವ ಈ ಜೋಡಿ ಕುರಿತು ಸಾಕಷ್ಟು ಕುತೂಹಲ ಕಾಡುತ್ತಿದೆ ಅಭಿಮಾನಿಗಳಲ್ಲಿ. ನಿನ್ನೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇಬ್ಬರು ಮುಂಬೈನ ಹಿಂದುಜಾ ಆಸ್ಪತ್ರೆಗೆ ಗುಟ್ಟಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ದೀಪಿಕಾ ಹಾಗೂ ರಣ್‍ವೀರ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ.

ಇದರ ಫೋಟೋ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ, ಇವರಿಬ್ಬರೂ ಏಕೆ ಈ ಆಸ್ಪತ್ರೆಗೆ ಹೋದರು ಎಂಬುದೇ ಚರ್ಚೆ. ಅಭಿಮಾನಿಗಳಿಗೆ ಇದು ಆಹಾರದ ವಸ್ತುವಾಗಿದ್ದು, ದೀಪಿಕಾ ಗರ್ಭಿಣಿಯಾಗಿದ್ದಾರೆ ಎಂದು ಚರ್ಚೆ ಶುರುವಾಗಿದೆ! ಈ ವೈರಲ್​ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಇದರ ಬಗ್ಗೆ ಗುಸುಗುಸು ಶುರು ಮಾಡಿದ್ದು, ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಸುದ್ದಿ ಮಾಡಿದ್ದಾರೆ.

ದೀಪಿಕಾ ಹಾಗೂ ರಣ್‍ವೀರ್ ಒಟ್ಟಿಗೆ ಅಭಿನಯಿಸಿದ್ದ ರಾಮಲೀಲಾ ಸಿನಿಮಾ ಇಬ್ಬರಿಗೂ ಭಾರಿ ಹೆಸರು ತಂದುಕೊಟ್ಟಿತ್ತು. ನಂತರ ಬಾಜೀರಾವ್ ಮಸ್ತಾನಿ ಹಾಗೂ ಪದ್ಮಾವತ್ ಸಿನಿಮಾ ಕೂಡ ಸೂಪರ್​ಹೊಟ್​ ಆಗಿದ್ದು, ಇದೀಗ ಈ ಜೋಡಿಯ ಬಗ್ಗೆ ಅಭಿಮಾನಿಗಳ ಕಣ್ಣು ನೆಟ್ಟಿದೆ.