ಕನಿಷ್ಠ ಎಂದರೆ ಐದು ಆರು ಘಂಟೆ ನಮ್ಮ ಮಾವನ ಕೆಟ್ಟ ಮಾತನ್ನು ನಾನು ಕೇಳಬೇಕು. ಒಂದು ಲೋಟ ಕೆಳಗೆ ಇಟ್ಟರೂ ಮೇಲೆ ಇಟ್ಟರೂ ತಪ್ಪು. ನನ್ನ ಗಂಡನೂ ಅವರಿಗೆ ಎದುರು ಹೇಳುವುದಿಲ್ಲ. ನಮ್ಮ ತಂದೆ ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರು ಎಂದು ನನ್ನ ಗಂಡ ಹೇಳುತ್ತಾರೆ.
ನಾನು ಯಾವ ರೀತಿ ತಲೆ ಬಾಚಿಕೊಳ್ಳಬೇಕು, ಯಾವರೀತಿ ಡ್ರೆಸ್ ಮಾಡಿಕೊಳ್ಳಬೇಕು , ಯಾವ ಕುಂಕುಮ ಇಟ್ಟುಕೊಳ್ಳ ಬೇಕು ಎಲ್ಲವೂ ನಮ್ಮ ಮಾವನೇ ಹೇಳುವುದು. ನಮ್ಮ ಅತ್ತೆಯೂ ಅದಕ್ಕೆ ಎದುರಾಡುವುದಿಲ್ಲ. ನಮ್ಮದು ವ್ಯಾಪಾರದ ಕುಟುಂಬ , ಮನೆಯ ಯಜಮಾನ ನಿಮ್ಮ ಮಾವ. ಅವರ ಇಷ್ಟವೇ ಇಲ್ಲಿ ನಡೆಯುವುದು ಎನ್ನುತ್ತಾರೆ. ಮಗುವನ್ನು ಒಂದು ನಿಮಿಷವೂ ನನಗೆ ಕೊಡುವುದಿಲ್ಲ. ಅದು ಪೂರ್ತಿ ನಿದ್ದೆ ಮಾಡಿದಮೇಲೆ ನನ್ನ ಹತ್ತಿರ ಹಾಸಿಗೆಗೆ ಮಗುವನ್ನು ಹಾಕಲು ಕೊಡುತ್ತಾರೆ. ಒಂದೇ ಮನೆಯಲ್ಲಿಯೇ ಇದ್ದರೂ ನನಗೆ ನನ್ನ ಮಗುವಿನ ಹತ್ತಿರ ಬಾಂಧವ್ಯವೇ ಇಲ್ಲದಂತೆ ಆಗಿದೆ. ಮಗುವಿಗೆ ಸ್ನಾನ ಮಾಡಿಸಲೂ ನನಗೆ ಬಿಡುವುದಿಲ್ಲ. ಕೆಲಸದವರ ಹತ್ತಿರ ಮಾಡಿಸುತ್ತಾರೆ. ʼ ಬೇಕಿದ್ದರೆ ಮಗುವನ್ನು ಬಿಟ್ಟು ನಿಮ್ಮ ತವರಿಗೆ ಹೋಗು ಅಥವಾ ಸಾಯಿ ಎನ್ನುತ್ತಾರೆ.ʼ ವಿದ್ಯಾವಂತಳಾದ ನಾನು ಈಗ ಹುಚ್ಚಿಯಂತೆ ಆಗಿದ್ದೇನೆ. ನನಗೆ ಸಲಹೆ ಕೊಟ್ಟು ಸಹಾಯ ಮಾಡಿ.
ಉತ್ತರ: ನಿಮ್ಮ ಪರಿಸ್ಥಿತಿ ಅರ್ಥ ಆಗುತ್ತಿದೆ. ನೀವು ಹೆದರ ಬೇಕಾಗಿಲ್ಲ. ಮಹಿಳಾ ಸಹಾಯವಾಣಿಯಲ್ಲಿ ದೂರುಕೊಡಿ. ಅವರು ನಿಮ್ಮ ಮಾವನನ್ನೂ ನಿಮ್ಮ ಪತಿ ಮತ್ತು ಅತ್ತೆಯ ಜೊತೆ ಕರೆಯಿಸಿ ಅವರಿಗೆ ಕೌನ್ಸೆಲಿಂಗ್ ಮಾಡುತ್ತಾರೆ. ಅಥವಾ ನಿಮ್ಮ ತಾಲ್ಲೂಕಿನ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಕ್ಕೆ ʼನಮ್ಮ ವಿವಾಹದಲ್ಲಿ ಕೆಲವು ವೈಮನಸ್ಯವಿದೆ. ಅದನ್ನು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ಪರಿಹರಿಸಿಕೊಡಿʼ ಎಂದು ಅರ್ಜಿ ಕೊಡಿ.
ಮಧ್ಯಸ್ಥಿಕೆ ಕೇಂದ್ರದವರು ನಿಮ್ಮ ಎಲ್ಲರನ್ನು ಕರೆಯಿಸಿ ಸಮಸ್ಯೆ ಪರಿಹಾರವಾಗಲು ಸಹಾಯ ಮಾಡುತ್ತಾರೆ. ಆಗಲೂ ತೊಂದರೆ ಮುಂದುವರೆದರೆ, ನೀವು ಧೈರ್ಯವಾಗಿ ಕೌಟುಂಬ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾಯ್ದೆಯ ಕೆಳಗೆ ನಿಮ್ಮ ಮಾವನವರನ್ನೂ ಪಾರ್ಟಿ ಮಾಡಿ ಪ್ರಕರಣವನ್ನು ದಾಖಲು ಮಾಡಿ.
ನೀವು ಹೇಳಿದ ವಿಷಯಗಳೆಲ್ಲ ಕೌಟುಂಬಿಕ ಹಿಂಸೆಯ ಪರಿವಿಧಿಗೆ ಬರುತ್ತದೆ. ನಿಮಗೆ ನ್ಯಾಯ ಸಿಗುತ್ತದೆ, ನೀವು ಹೆದರಬೇಕಾಗಿಲ್ಲ. ಮಗುವನ್ನು ನಿಮ್ಮಂದ ಬೇರೆ ಮಾಡಬಾರದು ಎನ್ನುವ ಆದೇಶವನ್ನೂ ನೀವು ಪಡೆಯಬಹುದು.