ಬೆಂಗಳೂರು: ಬಹುತೇಕ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವುದು ಸಾಮಾನ್ಯ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಕ್ರಿಕೆಟ್ ಆಡುತ್ತಾ, ತಮ್ಮದೇ ಆದ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಸಂಭ್ರಮಿಸುತ್ತಾರೆ. ಆದರೆ ಬೆಂಗಳೂರಿನ ಮಕ್ಕಳು ಆಡಿದ ಕ್ರಿಕೆಟ್ ಮಾತ್ರ ದೇಶಾದ್ಯಂತ ಸದ್ದು ಮಾಡಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರನ್ನೂ ಈ ಕ್ರಿಕೆಟ್ ಅಚ್ಚರಿಗೊಳಿಸಿದ್ದು, ಹೃದಯಾಳದಿಂದ ಈ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ.
ಅಷ್ಟಕ್ಕೂ ಅಂಥದ್ದೇನು ಈ ಕ್ರಿಕೆಟ್ನಲ್ಲಿ ನಡೆದದ್ದು ಅಂತೀರಾ? ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ಭಾರತಿ ಆವರಣದಲ್ಲಿ ನಡೆದ ಈ ಕ್ರಿಕೆಟ್ನ ವಿಶೇಷತೆ ಎಂದರೆ ಸಂಸ್ಕೃತದಲ್ಲಿಯೇ ಕಮೆಂಟ್ ಹೇಳಿದ್ದು!
ಸಂಸ್ಕೃತ ಭಾರತಿ ಆವರಣದ ಸಮೀಪ ಮಕ್ಕಳು ಕ್ರಿಕೆಟ್ ಆಡುವಾಗ ಸಂಸ್ಕೃತ ವಿದ್ವಾಂಸರಾದ ಲಕ್ಷ್ಮೀನಾರಾಯಣ ಅವರು ಸಂಸ್ಕೃತದಲ್ಲಿ ಕಾಮೆಂಟರಿ ಮಾಡಿದ್ದರು. ಅವರೇನೋ ಸಹಜವಾಗಿ ಈ ಕಮೆಂಟ್ ಮಾಡಿದ್ದರು. ಆದರೆ ಅವರ ಈ ಕಮೆಂಟ್ಗೆ ಈ ಪರಿಯಲ್ಲಿ ಶ್ಲಾಘನೆ ವ್ಯಕ್ತವಾಗುತ್ತದೆ ಎಂದು ಅವರೂ ಅಂದುಕೊಂಡಿರಲಿಕ್ಕಿಲ್ಲ. ಸಂಸ್ಕೃತದಲ್ಲಿ ಕಮೆಂಟ್ಮಾಡಿರುವ ಈ ವಿಡಿಯೋವನ್ನು ಅವರು, 'ಸಂಸ್ಕೃತ ಮತ್ತು ಕ್ರಿಕೆಟ್' ಎಂದು ಶೀರ್ಷಿಕೆ ಕೊಟ್ಟು ಟ್ವೀಟ್ ಮಾಡಿದ್ದರು.
ಸಂಸ್ಕೃತ ಪ್ರೇಮಿಗಳು ಈ ಟ್ವೀಟ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದೂ ಅಲ್ಲದೇ ಹಲವಾರು ಮಂದಿ ಇದನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣಿಗೂ ಬಿದ್ದು ಅವರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರೂ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿಕೊಂಡಿದ್ದು, ದೇಶಾದ್ಯಂತ ಪ್ರಶಂಸೆ ಮಹಾಪೂರವೇ ಹರಿದು ಬರುತ್ತಿದೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮೀ ನಾರಾಯಣ ಅವರು, 'ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಇಲ್ಲಿಯ ಗಲ್ಲಿಯಲ್ಲಿ ನಿತ್ಯ ಕ್ರಿಕೆಟ್ ಆಡೋ ವಠಾರದ ಹುಡುಗರನ್ನ ನೋಡಿ ಸಂಸ್ಕೃತದಲ್ಲೇ ಕಾಮೆಂಟರಿ ಮಾಡಿದರೆ ಹೇಗೆ ಅಂತ ಅಂದುಕೊಂಡು ಮಾಡಿದ್ದಷ್ಟೇ. ಆದರೆ ಇದು ಈ ಪರಿಯಲ್ಲಿ ವೈರಲ್ ಆಗುತ್ತದೆ ಎಂದು ಅಂದುಕೊಂಡಿರಲೇ ಇಲ್ಲ' ಎಂದಿದ್ದಾರೆ. (ಏಜೆನ್ಸೀಸ್)