ನೋಯ್ಡಾ: ಉತ್ತರ ಪ್ರದೇಶದಲ್ಲಿಯೂ ಕರೊನಾ ಹಾವಳಿ ಜಾಸ್ತಿಯಾಗಿದೆ. ಮಾಮೂಲಿ ಎಲ್ಲಾ ಕಡೆಗಳಲ್ಲಿ ಸದ್ಯ ಇರುವ ಸಮಸ್ಯೆಗಳಂತೆ, ಇಲ್ಲಿಯೂ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ. ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವಾಗ ಹೀಗೆಕೆ ಸಮಸ್ಯೆ ಎದುರಾಯಿತು ಎಂದು ನೋಡಲು ಆರೋಗ್ಯ ಇಲಾಖೆ ಅಧಿಕಾರಿಳು ಭೇಟಿ ಕೊಟ್ಟಾಗ ಅವರಿಗೆ ಶಾಕ್ ಆದ ಘಟನೆ ನಡೆದಿದೆ.
ಏಕೆಂದರೆ, ನೋಯ್ಡಾದ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದವರೂ ರೋಗಿಗಳ ಹೆಸರಲ್ಲಿ ಆಸ್ಪತ್ರೆಯ ಬೆಡ್‌ಗಳು ರಿಸರ್ವ್ ಆಗಿರುವುದು ತಿಳಿದಿದೆ. ಕೆಲವು ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಖಾಲಿ ಇದ್ದದ್ದನ್ನು ಅಧಿಕಾರಿಗಳು ನೋಡಿದರು. ಆದರೆ ಬೆಡ್‌ಗಳು ಖಾಲಿ ಇಲ್ಲ ಎಂಬ ಬೋರ್ಡ್‌ಗಳು ಆಸ್ಪತ್ರೆಗಳಲ್ಲಿ ಕಾಣಸಿಗುತ್ತಿವೆ. ಇದರಿಂದ ಅಚ್ಚರಿಗೊಂಡ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಹಲವರು ಪ್ರತಿಷ್ಠಿತರು ಅಗತ್ಯವಿಲ್ಲದಿದ್ದರೂ ಮುಂಜಾಗರೂಕತಾ ಕ್ರಮವಾಗಿ ಬೆಡ್‌ಗಳನ್ನು ರಿಸರ್ವ್ ಮಾಡಿಟ್ಟಿರುವುದು ಕಂಡುಬಂದಿದೆ.
ಹೀಗೆ ಅನಗತ್ಯವಾಗಿ ಹೆಚ್ಚುವರಿ ಹಣ ಪಡೆದು ಬೆಡ್‌ಗಳನ್ನು ಮೀಸಲು ಇಟ್ಟಿರುವ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ.
ಸೋಂಕಿತರಿಗೆ ಅಗತ್ಯವಾದ ಹಾಸಿಗೆಗಳನ್ನು ಬಿಟ್ಟುಕೊಡುವಂತೆ ಸೂಚಿಸಿದ್ದರೂ, ಕೆಲವು ಆಸ್ಪತ್ರೆಗಳು ಬಿಟ್ಟುಕೊಟ್ಟಿರಲಿಲ್ಲ. ಬೆಡ್ ಭರ್ತಿಯಾಗಿವೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸಂದೇಹದಿಂದ ಪರಿಶೀಲನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅನೇಕ ಪ್ರಸಿದ್ಧ ಆಸ್ಪತ್ರೆಗಳಲ್ಲಿದ್ದ ನೂರಾರು ಬೆಡ್‌ಗಳನ್ನು ಇದೇ ರೀತಿ ಖಾಲಿಯಾಗಿದ್ದು, ಕಾಯ್ದಿರಿಸಲಾಗಿದೆ ಎಂದು ಅವರು ಹೇಳಿದರು.