ನ್ಯೂಸ್

ಹಿಂದೂ ಹೆಸರು ಹೇಳಿ ಮದ್ವೆಯಾದ: ಸತ್ಯ ತಿಳಿಯುತ್ತಲೇ ವಿಧವೆ ಬಾಳಲ್ಲಿ ಘೋರ ದುರಂತ- ಪಾತಕಿಗೆ ಆಗುತ್ತಾ ಶಿಕ್ಷೆ?

suchetana

ಯಮುನಾನಗರ (ಹರಿಯಾಣ): ಹಿಂದೂ ಯುವತಿಯರು, ಮಹಿಳೆಯರನ್ನು ಪ್ರೇಮ ಪಾಶಕ್ಕೆ ಸಿಲುಕಿಸಿ ನಂತರ ಅವರಿಗೆ ಹಿಂಸೆ ನೀಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲವ್​ ಜಿಹಾದ್​ ಹೆಸರಿನಲ್ಲಿ ಹಿಂದೂ ಯುವತಿಯರ ಪ್ರಾಣಕ್ಕೆ ಕಂಟಕ ತರುತ್ತಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿದ್ದು, ಇದೀಗ ವಿಧವೆಯೊಬ್ಬರ ಬಾಳಿನಲ್ಲಿ ಘೋರ ದುರಂತದ ಘಟನೆ ನಡೆದಿದೆ.

ಹರಿಯಾಣದ ಯಮುನಾನಗರ ಜಿಲ್ಲೆಯ ವಿಧವೆಯೊಬ್ಬರಿಗೆ ಅಕ್ರಮ್​ ಎಂಬಾತ ತನ್ನ ಹೆಸರನ್ನು ಅಮನ್​ ಎಂದು ಹೇಳಿ ಮದುವೆಯಾಗಿದ್ದಾನೆ. 2006ರಲ್ಲಿ ಮಹಿಳೆಗೆ ಮದುವೆಯಾಗಿತ್ತು. ಗಂಡ ಮೃತಪಟ್ಟ ಬಳಿಕ ಆಕೆಯ ಸಂಬಂಧಿಕರು ಮಗನ ಜತೆಗೆ ಆಕೆಯನ್ನೂ ಹೊರಕ್ಕೆ ಹಾಕಿದ್ದಾರೆ. ತನಗೊಂದು ಆಸರೆ ಬೇಕು ಎಂದು ಮಹಿಳೆ ಅಂದುಕೊಳ್ಳುತ್ತಿರುವಾಗಲೇ ಸಿಕ್ಕಿದ್ದು ಈ ಪಾತಕಿ ಅಕ್ರಮ್​. ತನ್ನ ಹೆಸರನ್ನು ಅಮನ್​ ಎಂದು ಹೇಳಿ ಪರಿಚಯಿಸಿಕೊಳ್ಳುವ ಮೂಲಕ ವಿಧವೆಗೆ ಮೋಸ ಮಾಡಿದ್ದಾನೆ ಅಕ್ರಮ್​.

ಇದನ್ನು ತಿಳಿಯದ ಮಹಿಳೆ ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ಅಕ್ರಮ್​ ತನ್ನ ಕರಾಳ ಮುಖ ತೋರಿಸಲು ಶುರು ಮಾಡಿದ್ದಾನೆ. ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕುತ್ತಿದ್ದಾನೆ. ಒಂದು ವೇಳೆ ಮತಾಂತರಗೊಳ್ಳದಿದ್ದರೆ ಆತನ ಮನೆಯವರು ಸಾಯಿಸುವುದಾಗಿ ಹೇಳುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮೊದಲಿಗೆ ತಾನೊಬ್ಬ ಹಿಂದೂ, ತನ್ನ ಹೆಸರು ಅಮನ್​ ರಾಣಾ ಎಂದು ಹೇಳಿಕೊಂಡಿದ್ದ ಅಕ್ರಮ್​, ಮಹಿಳೆಗೆ ಯಾವುದೇ ಸಂದೇಹ ಬರಬಾರದು ಎಂದು ದೇವಸ್ಥಾನದಲ್ಲಿ ಮದುವೆಯಾಗಿದ್ದ. ಗಂಡನ ಮನೆಗೆ ಹೋದಾಗ ಆಕೆಗೆ ಸತ್ಯದ ಅರಿವಾಗಿದೆ. ಅಲ್ಲಿಂದಲೇ ತಾವು ನರಕಯಾತನೆ ಅನುಭವಿಸುತ್ತಿರುವುದನ್ನು ವಿವರಿಸಿದ್ದಾರೆ ಮಹಿಳೆ. ಗಂಡನ ಕುಟುಂಬಸ್ಥರು ಮಾಂಸಾಹಾರ ಅಡುಗೆ ಮಾಡುವಂತೆಯೂ ನನಗೆ ಬಲವಂತ ಮಾಡುತ್ತಿದ್ದರು. ಇಬ್ಬರು ಮಕ್ಕಳು ಹುಟ್ಟಿದ್ದು, ಅವರಿಗೆ ಬಲವಂತವಾಗಿ ಮುಸ್ಲಿಂ ಹೆಸರು ಇಟ್ಟಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇಷ್ಟೇ ಅಲ್ಲದೇ ಎರಡು ಮಕ್ಕಳಾದ ಮೇಲೆ ಗಂಡ ಇನ್ನೊಬ್ಬಳನ್ನು ಬಲೆಗೆ ಹಾಕಿಕೊಂಡಿದ್ದಾನೆ. ನನ್ನ ಮೊದಲ ಗಂಡನಿಂದ ಹುಟ್ಟಿದ ಮಗನನ್ನೂ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾನೆ ಎಂದಿರುವ ಮಹಿಳೆ ಇದೀಗ ರಕ್ಷಣೆ ನೀಡಬೇಕೆಂದು ವಕೀಲರ ಮೂಲಕ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಮತಾಂತರ ವಿರೋಧಿ ಮಸೂದೆಯನ್ನು ಹರಿಯಾಣ ವಿಧಾನಸಭೆಯಲ್ಲಿ ಇದೇ ಮಾರ್ಚ್ 22ರಂದು ಅಂಗೀಕರಿಸಲಾಗಿದೆ. ಇದರ ಅಡಿಯಲ್ಲಿ ಹರಿಯಾಣದಲ್ಲಿ ಬಲವಂತವಾಗಿ, ಅನಗತ್ಯ ಪ್ರಭಾವದಿಂದ ಅಥವಾ ದುರಾಸೆಯಿಂದ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ರೂಪಿಸಲಾಗಿದೆ. ಬಲವಂತದ ಮತಾಂತರ ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ 4 ಲಕ್ಷ ರೂ. ದಂಡ ವಿಧಿಸುವ ಅವಕಾಶವಿದೆ.