ನ್ಯೂಸ್

ಕಾಂಗ್ರೆಸ್‌ಗೆ ಬಿಗ್‌ ಶಾಕ್‌! ಅಖಿಲ ಭಾರತ ಅಧ್ಯಕ್ಷೆ ರಾಜೀನಾಮೆ- ಸೋನಿಯಾಗಾಂಧಿಗೆ ಪತ್ರ ರವಾನೆ

ನವದೆಹಲಿ: ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಹಿರಿಯ ಕಾಂಗ್ರೆಸ್ ನಾಯಕಿ, ಮಾಜಿ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಅಧ್ಯಕ್ಷೆ ಬಿಗ್‌ ಶಾಕ್‌ ನಿಡಿದ್ದಾರೆ. ಇವರು ಅಸ್ಸಾಂನ ಸಿಲ್‌ಚಾರ್‌ ಮೂಲದವರು.

ರಾಜೀನಾಮೆಗೆ ಯಾವುದೇ ಸ್ಪಷ್ಟ ಕಾರಣವನ್ನು ನೀಡದ ಸುಷ್ಮಿತಾ, ರಾಜೀನಾಮೆಯನ್ನು ಪಕ್ಷದ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜೊತೆಗಿನ ನನ್ನ ಮೂರು ದಶಕಗಳ ಸುದೀರ್ಘ ಒಡನಾಟವನ್ನು ನಾನು ಗೌರವಿಸುತ್ತೇನೆ. ನನ್ನ ಸ್ಮರಣೀಯ ಪ್ರಯಾಣದ ಭಾಗವಾಗಿರುವ ಪಕ್ಷ, ಅದರ ಎಲ್ಲಾ ನಾಯಕರು, ಸದಸ್ಯರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಸೋನಿಯಾ ಗಾಂಧಿಗೆ ಬರೆದಿದ್ದಾರೆ.

ಇದೇ ವೇಳೆ ಪಕ್ಷದ ಎಲ್ಲಾ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ಎಕ್ಸಿಟ್‌ ಆಗಿರುವ ಸುಷ್ಮಿತಾ, ಟ್ವಿಟರ್ ಪ್ರೊಫೈಲ್ ಬದಲಿಸಿ ಕಾಂಗ್ರೆಸ್ ಮಾಜಿ ಸದಸ್ಯೆ ಎಂದು ಬದಲಿಸಿದ್ದಾರೆ.

ಇದೇ ವೇಳೆ ಇವರು ತೃಣಮೂಲ ಕಾಂಗ್ರೆಸ್‌ (ಟಿಎಂಸಿ ) ಸೇರ್ಪಡೆಯಾಗುವ ಬಗ್ಗೆ ಸುದ್ದಿಯಾಗುತ್ತಿದೆ. ಸದ್ಯದಲ್ಲಿಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಕೋಲ್ಕತಾದಲ್ಲಿ ಭೇಟಿಯಾಗಲಿರುವ ಸುಷ್ಮಿತಾ ಈ ಮೂಲಕ ಟಿಎಂಸಿ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.