ತಿರುವನಂತಪುರ: ಕೇರಳದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷ, ಶಾಸಕ ಪಿ.ಟಿ ಥಾಮಸ್ ನಿಧನರಾಗಿದ್ದಾರೆ. ಇವರಿಗೆ 71 ವರ್ಷ ವಯಸ್ಸಾಗಿತ್ತು. ಕೆಲ ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಇವರು, ಕೇರಳ ರಾಜ್ಯ ವಿಧಾನಸಭೆಯ ತೃಕ್ಕಕ್ಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಎರಡು ಬಾರಿ ತೊಡುಪುಳ ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು. ಇವರು ಇಡುಕ್ಕಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಮಾಜಿ ಸಂಸದರೂ ಆಗಿದ್ದಾರೆ.ಅವರು ಪರಿಸರವಾದಿ ಹಾಗೂ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಥಾಮಸ್ ಅವರು ಯಾವಾಗಲೂ ಸಮಸ್ಯೆಗಳನ್ನು ಎತ್ತಿ ತೋರಿಸುವ ವ್ಯಕ್ತಿಯಾಗಿದ್ದರು. ಸದಾ ಸ್ಪಷ್ಟ ರಾಜಕೀಯ ನಿಲುವನ್ನು ವ್ಯಕ್ತಪಡಿಸುತ್ತಿದ್ದರು. ಅವರು ಉತ್ತಮ ವಾಗ್ಮಿ ಹಾಗೂ ಸಂಘಟಕರಾಗಿದ್ದು, ರಾಜ್ಯ ಗಮನಾರ್ಹ ಸಂಸದರನ್ನು ಕಳೆದುಕೊಂಡಿದೆ ಎಂದಿದ್ದಾರೆ.