ನ್ಯೂಸ್

ಮತ್ತೆ ಶಾಕ್‌ ಕೊಟ್ಟ ಸಿಲಿಂಡರ್‌, ದಿಢೀರ್‌ 100 ರೂ ಏರಿಕೆ! ವಾಣಿಜ್ಯ ಬಳಕೆದಾರರಿಗೆ ಶುರುವಾಯ್ತು ತಲೆನೋವು

ನವದೆಹಲಿ: ದಿನದಿಂದ ದಿನಕ್ಕೆ ಅಗತ್ಯವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಇದರ ನಡುವೆಯೇ ಪೆಟ್ರೋಲ್‌, ಡೀಸೆಲ್‌, ಅನಿಲಗಳ ಬೆಲೆಗಳೂ ಏರುತ್ತಲೇ ಇದೆ. ಇದೀಗ ವಾಣಿಜ್ಯ ಬಳಕೆಗೆ ಸಿಲಿಂಡರ್‌ ಬೆಲೆ ದಿಢೀರ್‌ ಎಂದು 100 ರೂಪಾಯಿ ಏರಿಕೆಯಾಗಿದ್ದು, ಉದ್ಯಮಿಗಳಿಗೆ ಭಾರಿ ಶಾಕ್‌ ನೀಡಿದೆ.

ಪ್ರತಿ ತಿಂಗಳು ಮೊದಲ ದಿನ ಪೆಟ್ರೋಲಿಯಂ ಕಂಪೆನಿಗಳಿಂದ ಬೆಲೆ ಪರಿಷ್ಕೃತವಾಗುತ್ತಿರುತ್ತವೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಅಡುಗೆ ಅನಿಲದ ಬೆಲೆ ಏರಿಕೆ ಆಗುತ್ತಲೇ ಇದೆ. ಅದರಂತೆ ಇಂದು ಕೂಡ ವಾಣಿಜ್ಯ ಬಳಕೆಗೆ 19 ಕೆಜಿ ತೂಕದ ಸಿಲಿಂಡರ್​ ಬೆಲೆಯನ್ನು 100 ರೂಪಾಯಿಗಳಷ್ಟು ಹೆಚ್ಚಿಸಿವೆ.

ಇದು ಹೋಟೆಲ್‌ ಉದ್ಯಮಿಗಳಿಗೆ ಭಾರಿ ಶಾಕ್‌ ನೀಡಿರುವ ಹಿನ್ನೆಲೆಯಲ್ಲಿ, ಹೋಟೆಲ್​​, ರೆಸ್ಟೋರೆಂಟ್​ಗಳಲ್ಲಿ ಕೂಡ ಆಹಾರ, ಪಾನೀಯಗಳು ದುಬಾರಿಯಾಗುವ ನಿರೀಕ್ಷೆ ಇದೆ. ಆದರೆ ಈ ತಿಂಗಳು ಗೃಹಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಸದ್ಯ ಏರಿಕೆ ಆಗಿಲ್ಲ.

ಅಂದಹಾಗೆ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆ ನವೆಂಬರ್​ನಲ್ಲಿ 266 ರೂಪಾಯಿ ಹೆಚ್ಚಾಗಿತ್ತು. ಈ ಬಾರಿ 100 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್​ ಬೆಲೆ 2101 ರೂ.ಆಗಿದ್ದು, ಕೋಲ್ಕತದಲ್ಲಿ 2177 ರೂ., ಮುಂಬೈನಲ್ಲಿ 2051 ರೂ., ಚೆನ್ನೈನಲ್ಲಿ 2234 ರೂ.ರಷ್ಟಾಗಿದೆ.