ನ್ಯೂಸ್

ರಾಖಿ ಕಟ್ಟಿದ ತಂಗಿಗೆ ಗಿಫ್ಟ್​ ತರಲು ಹೋದವ ಮರಳಿದ್ದು ಶವವಾಗಿ: ಸ್ನೇಹಿತನಿಂದಲೇ ನಡೆಯಿತು ಘೋರ ಕೃತ್ಯ

ನವದೆಹಲಿ: ಹುಡುಗಿಯೊಬ್ಬಳ ಜತೆ ಸಂಬಂಧ ಹೊಂದಿರುವ ಸ್ನೇಹಿತನ ಜತೆ ವಾಗ್ವಿದಾದಕ್ಕೆ ಇಳಿದು ದ್ವಿತೀಯ ಪಿಯುಸಿಯ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.

ಯುವರಾಜ್​ ಅಲಿಯಾಸ್​ ಅನ್ನು ಎಂಬ 20 ವರ್ಷದ ಯುವಕ ಕೊಲೆಯಾಗಿದ್ದಾನೆ. ರಕ್ಷಾಬಂಧನದ ಹಿನ್ನೆಲೆಯಲ್ಲಿ ತಂಗಿಯಿಂದ ರಾಖಿ ಕಟ್ಟಿಸಿಕೊಂಡಿದ್ದ ಯುವರಾಜ್​, ಆಕೆಗೆ ನೀಡಲು ಸಿಹಿ ತರಲು ಅಂಗಡಿಗೆ ಹೋಗಿದ್ದಾಗಲೇ ಕೊಲೆಯಾಗಿದ್ದಾನೆ! ಹುಡುಗಿಯ ವಿಚಾರವಾಗಿ ಯುವರಾಜ್​ ಹಾಗೂ ಸ್ನೇಹಿತರ ನಡುವೆ ನಡೆದ ಜಗಳವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.

ಯುವರಾಜ್​ನ ಸ್ನೇಹಿತ ಸನ್ನಿ ಎಂಬಾತ ಅಲ್ಲಿಯೇ ಸಮೀಪದ ಮನೆಯೊಂದರ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆಯ ವಿಷಯವನ್ನು ಯುವರಾಜ್​ ಬಳಿ ಪ್ರಸ್ತಾಪಿಸಿದ್ದಾನೆ. ಅದೇನು ಇಬ್ಬರ ನಡುವೆ ಮಾತುಕತೆಯಾಗಿದೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಆ ಹುಡುಗಿಯ ವಿಚಾರವಾಗಿ ತೀವ್ರ ಸ್ವರೂಪದ ವಾಗ್ವಿವಾದ ಆಗಿದೆ. ಇದರಿಂದ ಸಿಟ್ಟಿಗೆದ್ದ ಸನ್ನಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಸನ್ನಿ ಜತೆಗಿದ್ದ ಇತರ ಸ್ನೇಹಿತ ಕಲ್ಲಿ ಅಲಿಯಾಸ್​ ಹಿಮಾಂಶು ಕೂಡ ಜತೆಯಾಗಿದ್ದಾನೆ. ಇಬ್ಬರೂ ಸೇರಿ ಯುವರಾಜ್​ನನ್ನು ಚಾಕುವಿನಿಂದ ಇರಿದಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವರಾಜ್​ನನ್ನು ದಾರಿಯಲ್ಲಿ ಹೋಗುವವರು ಯಾರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ, ಬದಲಿಗೆ ವಿಡಿಯೋ ಮಾಡುವಲ್ಲಿ ತಲ್ಲೀನರಾಗಿದ್ದರು. ಕೊನೆಗೆ ಅಲ್ಲಿಯೇ ಯುವರಾಜ್​ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಣ್ಣ ತನಗಾಗಿ ಸಿಹಿ ಹಾಗೂ ಉಡುಗೊರೆ ತರುತ್ತಾನೆ ಎಂದು ಕಾದು ಕುಳಿತ ತಂಗಿಗೆ ಸಿಕ್ಕಿದ್ದು ಅಣ್ಣನ ಶವ! (ಏಜೆನ್ಸೀಸ್​)