ನ್ಯೂಸ್

ಲಡಾಖ್​ ಗಡಿಯೊಳಗೆ ನುಸುಳಿದ ಚೀನಿ ಸೈನಿಕ- ಬೆಚ್ಚಗಿನ ಆಹಾರ, ಬಟ್ಟೆ ನೀಡಿದ ಯೋಧರು!

ಲಡಾಖ್​: ಯಾರು ಏನೇ ಕುತಂತ್ರ ಮಾಡಲಿ, ಕದನ ವಿರಾಮ ಉಲ್ಲಂಘಿಸಿ ಶತ್ರು ಸೈನಿಕರು ದಾಳಿಯೇ ಮಾಡಲಿ, ಭಾರತೀಯ ಸೇನೆ ಮಾತ್ರ ಸದಾ ಸಹಾಯಹಸ್ತ ಚಾಚುವಲ್ಲಿ ಹಿಂದೆ ಬಿದ್ದಿಲ್ಲ, ಶತ್ರುಗಳಾದರೂ ಅವರಿಗೆ ನಿಯಮಾನುಸಾರವಾಗಿ ಸಿಗಬೇಕಾದ ಮರ್ಯಾದೆಗಳಿಗೆ ಅನುಸಾರವಾಗಿಯೇ ನಡೆದುಕೊಳ್ಳುತ್ತದೆ. ಭಾರತೀಯ ಸೇನೆಯ ಇಂಥದ್ದೊಂದು ಔದಾರ್ಯ ಮತ್ತೊಮ್ಮೆ ಸಾಬೀತಾಗಿದೆ.

ಲಡಾಖ್​ ಗಡಿಯೊಳಗೆ ಅಕ್ರಮವಾಗಿ ನುಸುಳಿದ ಚೀನಿ ಸೈನಿಕರಿಗೆ ವೈದ್ಯಕೀಯ ನೆರವು, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಭಾರತೀಯ ಯೋಧರು ನೀಡಿದ್ದಾರೆ. ಇದಕ್ಕೆ ಕಾರಣ, ಆ ಸೈನಿಕ ಆಕಸ್ಮಿಕವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿರಬಹುದು ಎಂಬ ಕಾರಣಕ್ಕೆ!

ಲಡಾಖ್‌ನ ಚುಮಾರ್-ಡೆಮ್‌ಚೋಕ್ ಪ್ರದೇಶದಲ್ಲಿ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಸೈನಿಕನನ್ನು ಭಾರತೀಯ ಸೇನೆಯು ಬಂಧಿಸಿದೆ. ಆಕಸ್ಮಿಕವಾಗಿ ಭಾರತದ ಗಡಿಗೆ ಪ್ರವೇಶಿಸಿರಬಹುದು ಎನ್ನುವ ಕಾರಣಕ್ಕೆ ಅವನಿಗೆ ಎಲ್ಲ ರೀತಿಯ ನೆರವು ನೀಡಲಾಗಿದೆ. ಇಲ್ಲಿ ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಅವನನ್ನು ರಕ್ಷಿಸಲು ವೈದ್ಯಕೀಯ ನೆರವು, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳನ್ನು ನೀಡಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

ಈ ಸೈನಿಕನನ್ನು ಕಾರಪೋರಲ್ ವಾಂಗ್ ಯಾ ಲಗ್ ಎಂದು ಗುರುತಿಸಲಾಗಿದೆ. ಆ ಚೀನೀ ಸೈನಿಕನ ಬಳಿ ಮಿಲಿಟರಿ ಮತ್ತು ನಾಗರಿಕ ದಾಖಲೆಗಳು ಸಿಕ್ಕಿದ್ದು, ಆತ ಗೂಢಚಾರಿಕೆಗೆ ಬಂದಿದ್ದನಾ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆತ ಹೇಳಿರುವ ಪ್ರಕಾರ ಕಳೆದುಹೋದ ತನ್ನ ಯಾಕ್ (ಹಸು ರೀತಿಯ ಪ್ರಾಣಿ) ಹುಡುಕುತ್ತಾ ಭಾರತದ ಭಾಗಕ್ಕೆ ಬಂದಿದ್ದನಂತೆ. ಆದ್ದರಿಂದ ಅಕಸ್ಮತ್ತಾಗಿ ಬಂದಿರಬಹುದು ಎಂದು ಊಹಿಸಲಾಗಿದೆ. ವಿಚಾರಣೆ ಬಳಿಕ ಸೇನಾ ನಿಯಮದ ಪ್ರಕಾರ ಅವರನ್ನು ಚೀನಾ ಗಡಿಭಾಗಕ್ಕೆ ವಾಪಸ್ ಕಳುಹಿಸಿಕೊಡುತ್ತೇವೆ' ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ.

ಈ ಕುರಿತಂತೆ ಕಾಣೆಯಾದ ಸೈನಿಕ ಕುರಿತು ಚೀನ ಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು, ಹಸ್ತಾಂತರ ಮಾಡುವಂತೆ ಕೇಳಿಕೊಂಡಿದೆ.

ಈ ನಡುವೆಯೇ, ಲಡಾಖ್‌ನ ಪ್ರಮುಖ 13 ಶಿಖರಗಳನ್ನು ಮೈಕೊರೆಯುವ ಚಳಿಯ ನಡುವೆ ಭಾರತ ಆಕ್ರಮಿಸಿಕೊಂಡಿದೆ. ಮೈನಸ್ 25 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದೆ. ಭಾರತವು ಅಮೆರಿಕದಿಂದ ಹೆಚ್ಚಿನ ಯುದ್ಧ ಕಿಟ್ ಮತ್ತು ಚಳಿಗಾಲದ ಬಟ್ಟೆಗಳನ್ನು ಖರೀದಿಸಿದೆ.

ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನ 60 ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ಅಮೆರಿಕ ಕಳೆದ ವಾರ ಮಾಹಿತಿ ನೀಡಿತ್ತು.