ನವದೆಹಲಿ: ಲಡಾಖ್ನಲ್ಲಿ ಭಾರತಕ್ಕೆ ಸೇರಿದ 38 ಸಾವಿರ ಚದರ ಕಿಲೋಮೀಟರ್ ಭಾಗವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬ ಮಾಹಿತಿಯನ್ನು ರಾಜ್ಯಸಭೆಯಲ್ಲಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತ ಮತ್ತು ಚೀನಾ ಗಡಿವಿಚಾರದ ಬಗ್ಗೆ ಮಾತನಾಡಿದ ಅವರು, ಭಾರತದ ಗಡಿಭಾಗದಲ್ಲಿ ನಿರಂತರವಾಗಿ ತಂಟೆ ಮಾಡುತ್ತಿರುವ ಚೀನಾ ದೇಶ ಇದಾಗಲೇ 38 ಸಾವಿರ ಚದರ ಕಿಲೋಮೀಟರ್ ಭಾಗವನ್ನು ಆಕ್ರಮಿಸಿಕೊಂಡಿದೆ. ಪೂರ್ವ ವಲಯದ ಅರುಣಾಚಲ ಪ್ರದೇಶ ಗಡಿಭಾಗದಲ್ಲಿ ಚೀನಾ 90 ಸಾವಿರ ಚದರ ಕಿಮೀ ಪ್ರದೇಶವನ್ನು ಅತಿಕ್ರಮಣ ಮಾಡಿದೆ. ಈ ರೀತಿಯಾಗಿ, ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಒಟ್ಟೂ 1,28,000 ಚದರ ಕಿಲೋಮೀಟರ್ನಷ್ಟು ಭೂಭಾಗವನ್ನು ಅಕ್ರಮವಾಗಿ ಚೀನಾ ವಶದಲ್ಲಿ ಇರಿಸಿಕೊಂಡಿದೆ ಎಂದು ಹೇಳಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) 5,180 ಚದರ ಕಿಮೀ ಪ್ರದೇಶವನ್ನು ಪಾಕಿಸ್ತಾನ ಚೀನಾಗೆ ಅಕ್ರಮವಾಗಿ ನೀಡಿದೆ. ಇದು 1963ರ ಗಡಿ ಒಪ್ಪಂದದ ಉಲ್ಲಂಘನೆಯಾಗಿದೆ. ಭಾರತದೊಂದಿಗಿನ ಎಲ್ಎಸಿ ಗಡಿಯಲ್ಲಿ ಸೇನಾಪಡೆಗಳನ್ನ ನಿಯೋಜಿಸುವ ಮೂಲಕ ಚೀನಾ 1993 ಮತ್ತು 1996ರ ಒಪ್ಪಂದಗಳ ಉಲ್ಲಂಘನೆ ಮಾಡಿದೆ ಎಂದು ಸಚಿವರು ಆರೋಪಿಸಿದರು.
ಭಾರತದ ರಕ್ಷಣೆಗೆ ಕರ್ನಲ್ ಸಂತೋಷ್ ಬಾಬು ಹಾಗೂ ಇತರ 19 ಸೈನಿಕರು ಗಾಲ್ವನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ನಮ್ಮ ಸೈನಿಕರ ನೈತಿಕ ಬಲ ಹೆಚ್ಚಿಸಲು ಖುದ್ದು ಪ್ರಧಾನಿ ಲಡಾಖ್ಗೆ ತೆರಳಿ ಸ್ಥೈರ್ಯ ತುಂಬಿದ್ದಾರೆ ಎಂದರು.
ಗಡಿಭಾಗದಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ನಮ್ಮ ಸೇನೆಗೆ ಇಡೀ ದೇಶ ಬೆಂಬಲವಾಗಿ ನಿಲ್ಲುತ್ತದೆ ಎಂದು ಈ ಸಂದರ್ಭದಲ್ಲಿ ಎಲ್ಲ ಸಂಸದರು ಹೇಳಿದರು.