ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಭಯಾನಕತೆ ಇದೀಗ ಬೆಳಕಿಗೆ ಬಂದಿದ್ದು, ಜನರು ಭಯಭೀತರಾಗುತ್ತಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಶವದ ಪಕ್ಕದಲ್ಲಿಯೇ ಸೋಂಕಿತರು ಮಲಗುವಂತಾದರೆ, ಅವರ ಸಂಬಂಧಿಕರೂ ಅಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಇಲ್ಲಿ ಆಸ್ಪತ್ರೆಗೆ ಕರೊನಾ ಹಾಟ್‌ಸ್ಪಾಟ್ ಆಗಿ ಪರಿವರ್ತನೆ ಆಗುತ್ತಿರುವುದಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಶವ ಪಕ್ಕದಲ್ಲಿಯೇ ಇದ್ದರೂ ಅಲ್ಲಿಯೇ ಸೋಂಕಿತರು, ಸಂಬಂಧಿಕರು ಊಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪಿಪಿಇ ಕಿಟ್ ಧರಿಸದೇ ಸೋಂಕಿತರ ಸಂಪರ್ಕವನ್ನು ಸಂಬಂಧಿಕರು ಮಾಡುತ್ತಿದ್ದು, ಇದು ಕೂಡ ಅತ್ಯಂತ ಅಪಾಯಕಾರಿ ಎನ್ನಲಾಗಿದೆ.
ಸೋಂಕಿತರನ್ನು ಭೇಟಿ ಮಾಡಿ ನಂತರ ಸಂಬಂಧಿಕರು ಹೊರಗಡೆ ಓಡಾಟ ನಡೆಸುತ್ತಿದ್ದಾರೆ. 12 ದಿನ ಕಠಿಣ ಲಾಕ್ ಡೌನ್ ಮಾಡಿದರೂ ಚಿಕ್ಕಮಗಳೂರಿನಲ್ಲಿ ಕರೊನಾ ಸೋಂಕು ಕೊಂಚವೂ ಕಡಿಮೆಯಾಗದಿರುವುದಕ್ಕೆ ಇದೇ ಕಾರಣ ಎಂದು ಆರೋಪಿಸಲಾಗಿದೆ. ಲಾಕ್‌ಡೌನ್ ಇದ್ದ ಸಂದರ್ಭದಲ್ಲಿ ಜನರು ಸಾಕಷ್ಟು ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿಯೂ ಸೋಂಕು ಏರುತ್ತಲೇ ಇರುವುದಕ್ಕೆ ಈ ಆಸ್ಪತ್ರೆಯ ವಾತಾವರಣ ಕಾರಣ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.