ನ್ಯೂಸ್

ಸರ್ಕಾರಿ ಉದ್ಯೋಗ, ಶಿಕ್ಷಣ ಸಂಸ್ಥೆಗಳಲ್ಲಿ ಶೇ.58 ಮೀಸಲಾತಿ: ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್​

ಬಿಲಾಸಪುರ್ (ಛತ್ತೀಸಗಢ): ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.58ರಷ್ಟು ಮೀಸಲಾತಿಯನ್ನು ನೀಡುವ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶವನ್ನು ಛತ್ತೀಸಗಢ ಹೈಕೋರ್ಟ್​ ರದ್ದು ಮಾಡಿದೆ. ನಿಯಮದ ಪ್ರಕಾರ ಶೇ.50ರಷ್ಟು ಮೀಸಲಾತಿ ಇರಬೇಕು. ಇದನ್ನು ಮೀರಿದ ಹಿನ್ನೆಲೆಯಲ್ಲಿ ಈ ಮೀಸಲಾತಿಯ ಅಸಂವಿಧಾನಿಕ ಎಂದು ಮುಖ್ಯ ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ನೇತೃತ್ವದ ಪೀಠ ಹೇಳಿದೆ.

2012ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮೀಸಲಾತಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿತ್ತು. ಅದನ್ನು ಗುರು ಘಾಸಿದಾಸ್ ಸಾಹಿತ್ಯ ಸಮಿತಿ ಮತ್ತು ಇತರರು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಈ ತಿದ್ದುಪಡಿಯ ಪ್ರಕಾರ ಪರಿಶಿಷ್ಟ ಜಾತಿಗಳ ಕೋಟಾವನ್ನು ಶೇಕಡಾ 4 ರಷ್ಟು ಕಡಿತಗೊಳಿಸಿ ಶೇ. 12ಕ್ಕೆ ಇಳಿಸಲಾಯಿತು. ಆದರೆ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ. 12 ರಷ್ಟು ಹೆಚ್ಚಿಸಲಾಗಿತ್ತು. ಮೊದಲು ಇದ್ದ ಶೇ.20 ರಿಂದ ಶೇ.32ಕ್ಕೆ ಅದನ್ನು ಏರಿಸಲಾಗಿತ್ತು. ಒಬಿಸಿ ಮೀಸಲಾತಿಯನ್ನು ಶೇ. 14ಕ್ಕೆ ಯಥಾಸ್ಥಿತಿಯಲ್ಲಿ ಇರಿಸಲಾಗಿತ್ತು.

ತಿದ್ದುಪಡಿಯ ನಂತರ ರಾಜ್ಯದಲ್ಲಿ ಸಂಚಿತ ಮೀಸಲಾತಿಯು ಶೇಕಡಾ 50ರ ಮಿತಿಯನ್ನು ಮೀರಿ ಶೇಕಡಾ 58ಕ್ಕೆ ಏರಿಕೆಯಾಯಿತು. ಮೀಸಲಾತಿ ಪ್ರಮಾಣ ಶೇ 50 ಮೀರಿರುವುದರಿಂದ ಸಂವಿಧಾನದ 16(1)ನೇ ಪರಿಚ್ಛೇದದ ಅಡಿಯಲ್ಲಿ ಸಮಾನತೆಯ ತತ್ವಗಳನ್ನು ಉಲ್ಲಂಘಿಸಲಾಗಿದೆ ಎಂಬ ವಕೀಲರ ವಾದವನ್ನು ಕೋರ್ಟ್ ಮಾನ್ಯ ಮಾಡಿದೆ. (ಏಜೆನ್ಸೀಸ್​)