ಬೆಂಗಳೂರು: ಜುಲೈ 30 ರಿಂದ ಆಗಸ್ಟ್ 1ರ ವರೆಗೆ ನಡೆದಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್‌ಗೆ 1,94, 419 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಅವರ ಪೈಕಿ ಪರೀಕ್ಷೆ ಬರೆದವರು 1, 75,349. ಇದರಲ್ಲಿ 1,53,470 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್‌ಗೆ ರ್‍ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸ್‌ಗೆ 1,27,627 ವಿದ್ಯಾರ್ಥಿಗಳಿಗೆ, ವೆಟರ್ನರಿ ಕೋರ್ಸ್‌ಗೆ 1, 29,666, ಯೋಗ ಮತ್ತು ನ್ಯಾಚುರೋಪಥಿಗೆ 1,29,611 ಹಾಗೂ ಬಿ-ಫಾರ್ಮಾ- ಡಿ-ಫಾರ್ಮಾಕ್ಕೆ 1,55,552 ಮಂದಿಗೆ ರ್‍ಯಾಂಕ್ ನೀಡಲಾಗಿದೆ.
ಈ ಕುರಿತು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕರೊನಾ ಕಾರಣದಿಂದಾಗಿ ಈ ಬಾರಿ ಪರೀಕ್ಷೆ ಕೊಂಚ ವಿಳಂಬವಾಗಿ ನಡೆದಿದೆ. ಆದರೆ ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಸಿಇಟಿ ಪರೀಕ್ಷೆ ನಡೆದ ಕೇವಲ 21 ದಿನಗಳಲ್ಲಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು.
ಪರೀಕ್ಷೆ ನಡೆದ ದಿನ ವರಮಹಾಲಕ್ಷ್ಮಿ ಹಬ್ಬವಿತ್ತು. ಇಂದು ಗೌರಿ ಹಬ್ಬಕ್ಕೆ ಫಲಿತಾಂಶ ನೀಡುತ್ತಿದ್ದೇವೆ. ಈ ಬಾರಿ ಸುಮಾರು 1,84,368 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಸಿಟಿ- 2020 ಬರೆದಿದ್ದರು 1800 ಇತರ ರಾಜ್ಯಗಳ ವಿದ್ಯಾರ್ಥಿಗಳೂ ಕರ್ನಾಟಕದಲ್ಲಿ ಪರೀಕ್ಷೆ ಬರೆದಿದ್ದರು. ಇದರ ಹೊರತಾಗಿ 63 ಕರೊನಾ ಸೋಂಕಿತ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲರಿಗೂ ಸೂಕ್ತವಾದ ವ್ಯವಸ್ಥೆ ಮಾಡಲಾಗಿತ್ತು. ಮೊದಲು 53 ಸ್ಥಳಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಕರೊನಾದಿಂದಾಗಿ ಈ ಬಾರಿ ಹೊಸದಾಗಿ 75 ಸೇರಿಸಿದ್ದೇವೆ. ಒಟ್ಟು 127 ಸ್ಥಳದಲ್ಲಿ ಪರೀಕ್ಷೆ ನಡೆದಿದೆ. 497 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು ಎಂದು ಅವರು ಹೇಳಿದರು.
ಸಿಇಟಿಗಾಗಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಬೇತಿ ನೀಡಿದ್ದೆವು. ಇದು ವಿದ್ಯಾರ್ಥಿಗಳ ನೆರವಿಗೆ ಬಂದಿದೆ. 4.2 ರೇಟಿಂಗ್ ಆಗಿರುವುದು ನಮ್ಮ ಸರ್ಕಾರದ ಹೆಮ್ಮೆ ಎಂದು ಹೇಳಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್, ಟೆಕ್ನಾಲಜಿ, ಯೋಗ ಮತ್ತು ನ್ಯಾಚುರೋಪಥಿ, ಫಾರ್ಮ ಸೈನ್ಸ್ ಕೋರ್ಸ್‌ಗಳು, ಬಿ.ಫಾರ್ಮ್, ಫಾರ್ಮ್-ಡಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಸಿಇಟಿ ಪರೀಕ್ಷೆ ನಡೆಸುತ್ತದೆ.
ಇಂಜಿನಿಯರಿಂಗ್ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್-ಕೆ, ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ ಹಾಗೂ ರಾಜ್ಯ ಮತೀಯ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘದ ಪ್ರತಿನಿಧಿಗಳೊಂದಿಗೆ ಈಗಾಗಲೇ ಶಿಕ್ಷಣ ಸಚಿವರು ಸಭೆ ನಡೆಸಿದ್ದಾರೆ.
ಕೋವಿಡ್ ಮತ್ತು ನೆರೆ ಕಾರಣಕ್ಕೆ ಶುಲ್ಕ ಹೆಚ್ಚಳ ಮಾಡಲಾಗುವುದಿಲ್ಲ. ಅಲ್ಲದೆ ಕಳೆದ ವರ್ಷದ ಸೀಟು ಹಂಚಿಕೆ ಪ್ರಮಾಣದಲ್ಲಿಯೇ ಈ ವರ್ಷ ಕೂಡ ಸೀಟು ಹಂಚಿಕೆ ಮಾಡಲು ತೀರ್ಮಾನಿಸಿದ್ದು, ಇದಕ್ಕೆ ಎಲ್ಲ ಸಂಘಗಳ ಪ್ರತಿನಿಧಿಗಳೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಲು ಅಧಿಕೃತ ವೆಬ್‌ಸೈಟ್ ವಿಳಾಸ http:/karresults.nic.in ಗೆ ಭೇಟಿ ನೀಡಿರಿ.