ನ್ಯೂಸ್

ಕರೊನಾ ಸೋಂಕು ಏರಿಕೆ ಹಿನ್ನೆಲೆಯಲ್ಲಿ ಸೂಚನೆ : ಜನದಟ್ಟಣೆ ತಪ್ಪಿಸಿ, ಕೇಂದ್ರ ಎಚ್ಚರಿಕೆ

suchetana

ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ಏರಿಕೆ ಆಗುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಸಭೆ, ಸಮಾರಂಭಗಳನ್ನು ತಪ್ಪಿಸಿ ಮತ್ತು ಕೋವಿಡ್​ ನಿಯಮಗಳ ಪಾಲನೆಯನ್ನು ಕಡ್ಡಾಯವಾಗಿ ಪಾಲಿಸಿ ಎಂದು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೂಚಿಸಿದೆ. ಸೋಂಕು ಹೆಚ್ಚಳದ ಕಾರಣದಿಂದ ದೆಹಲಿಯಲ್ಲಿ ಮಾಸ್ಕ್​ ಕಡ್ಡಾಯ ಮಾಡಲಾಗಿದೆ. ಇದೇ ವಿಷಯವಾಗಿ ಕಳೆದ ವಾರ ಏಳು ರಾಜ್ಯಗಳಿಗೆ ಬರೆದ ಪತ್ರದಲ್ಲೂ ಆರೋಗ್ಯ ಸಚಿವಾಲಯ ಇದೇ ಅಂಶವನ್ನು ಉಲ್ಲೇಖಿಸಿತ್ತು.

ಹೃದ್ರೋಗ ಸಾಧ್ಯತೆ: ಕೋವಿಡ್​ನಿಂದ ಚೇತರಿಸಿಕೊಂಡವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸುವ ಸಾಧ್ಯತೆ ಇದೆ. ಹೀಗಾಗಿ ಕರೊನಾದಿಂದ ಚೇತರಿಸಿಕೊಂಡ ಹೃದ್ರೋಗಿಗಳು ಬಹುಎಚ್ಚರಿಕೆಯಿಂದ ಇರಬೇಕು ಎಂದು ಅಮೆರಿಕದ ಟ್ರಿನೆಟ್​ಎಕ್ಸ್​ ನಡೆಸಿದ ಅಧ್ಯಯನ ತಿಳಿಸಿದೆ. ಲ್ಯಾನ್ಸೆಟ್​ ನಿಯತಕಾಲಿಕೆಯಲ್ಲಿ ಇದು ಪ್ರಕಟವಾಗಿದೆ. ಕರೊನಾ ಸೋಂಕಿನಿಂದ ಗುಣವಾದರೂ ಒಂದು ವರ್ಷದವರೆಗೆ ಹೃದಯದ ಸಮಸ್ಯೆಗೆ ಈಡಾಗುವ ಸಾಧ್ಯತೆ ಎಂಬ ಅಂಶ ಕರೊನಾ ಇಲ್ಲದ ಹೃದ್ರೋಗಿಗಳು ಮತ್ತು ಕರೊನಾದಿಂದ ಚೇತರಿಸಿಕೊಂಡ ಹೃದ್ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. 65 ವರ್ಷ ಮೇಲ್ಪಟ್ಟವರಲ್ಲಿ ಹೃದಯದ ಸಮಸ್ಯೆ ಹೆಚ್ಚಬಹುದು ಎಂದು ಅಧ್ಯಯನ ಹೇಳಿದೆ.

ಕೇರಳದಲ್ಲಿ 10 ಮಂದಿ ಸಾವು: ದೇಶದಲ್ಲಿ ಶುಕ್ರವಾರ 16,561 ಹೊಸ ಪ್ರಕರಣ ಪತ್ತೆಯಾ ಗಿದ್ದು, ಒಟ್ಟು ಸಂಖ್ಯೆ 4,42,23,557ಕ್ಕೆ ಏರಿದೆ. ಇದೇ ಅವಧಿಯಲ್ಲಿ 49 ಸೋಂಕಿತರು ಮರಣಿಸಿದ್ದು, ಸತ್ತವರ ಒಟ್ಟು ಸಂಖ್ಯೆ 5,26,929 ಕ್ಕೆ ಮುಟ್ಟಿದೆ. ಕೇರಳದಲ್ಲಿ ಒಂದೇ ದಿನ 10 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 0.28ಕ್ಕೆ ಇಳಿದಿದ್ದು, ಚೇತರಿಕೆ ಪ್ರಮಾಣ ಶೇ. 98.53ಕ್ಕೆ ಏರಿದೆ. ಕಳೆದ 24 ತಾಸಿನಲ್ಲಿ 1,541 ಸಕ್ರಿಯ ಪ್ರಕರಣಗಳಿದ್ದು, ನಿತ್ಯದ ಪಾಸಿಟಿವಿಟಿ ದರ ಶೇ. 5.44 ಇದೆ.