ನವದೆಹಲಿ: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ದೆಹಲಿ ವಿವಿ ಪ್ರಾಧ್ಯಾಪಕ, ಕಾರ್ಯಕರ್ತ ಅಪೂರ್ವಾನಂದ್ ಹಾಗೂ ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ರಾಹುಲ್ ರಾಯ್ ಅವರ ಹೆಸರನ್ನು ಸೇರಿಸಲಾಗಿದೆ ಎನ್ನಲಾಗಿದ್ದು, ಈ ಗಲಭೆಗೆ ಇವರು ಕೂಡ ಪ್ರಚೋದನೆ ನೀಡಿರುವುದಾಗಿ ಈ ಚಾರ್ಜ್ಷೀಟ್ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಒಂದೇ ಚಿತ್ರಕ್ಕೆ ಲಕ್ಷ್ಮೀಬಾಯಿ ಎಂದು ಭಾವಿಸಿದ್ರೆ, ಇವರ್ಯಾರು ಮತ್ತೆ?: ಕಂಗನಾ ಕಾಲೆಳೆದ ಪ್ರಕಾಶ್ ರಾಜ್!
ಸಿಎಎ ವಿರೋಧಿಸಿ ಕೆಲವು ಪ್ರತಿಭಟನಾಕಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಾಳುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರತಿಭಟನೆಯು ಯಾವ ಮಟ್ಟಕ್ಕಾದರೂ ಹೋಗಲಿ ಎಂದು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವಿದೆ.
ಅಷ್ಟೇ ಅಲ್ಲದೇ ಸಿಎಎ ಹಾಗೂ ಎನ್ಆರ್ಸಿ ಮುಸ್ಲಿಂ ವಿರೋಧಿಯಾಗಿರುವುದಾಗಿ ಅಪಪ್ರಚಾರ ಮಾಡುವ ಮೂಲಕ, ಹಾಗೂ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನವನ್ನು ಹರಡಿ ಕೇಂದ್ರ ಸರ್ಕಾರಕ್ಕೆ ಮಸಿಬಳಿಯುವ ಯತ್ನ ನಡೆಸಿರುವಲ್ಲಿ ಇವರದ್ದು ಪ್ರಮುಖ ಪಾತ್ರ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಪಟ್ಟಿಯಲ್ಲಿ ಹೆಸರು ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಫೆ.23-26 ವರೆಗೆ ನಡೆದ ಪ್ರತಿಭಟನೆಯಲ್ಲಿ 53 ಜನರು ಮೃತಪಟ್ಟಿದ್ದರು, 581 ಜನರಿಗೆ ಗಾಯಗಳಾಗಿವೆ. 97 ಜನರಿಗೆ ಗುಂಡೇಟು ತಗುಲಿದೆ.