ಗುಡಮಲಾನಿ (ರಾಜಸ್ಥಾನ): ಕಾರು ಮತ್ತು ಟ್ರಕ್ ಮಧ್ಯೆ ನಡೆದಿರುವ ಭೀಕರ ಅಪಘಾತದಲ್ಲಿ ಒಂದು ಕುಟುಂಬದ ಎಂಟು ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಗುಡಮಲಾನಿ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಒಂದೇ ಕುಟುಂಬದವರು ನಿನ್ನೆ ರಾತ್ರಿ ಎಸ್‌ಯುವಿ ಕಾರಿನಲ್ಲಿ ಗುಡಮಲಾನಿಯಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಈ ವೇಳೆ ಮಾರ್ಗಮಧ್ಯೆ ಕಾರು ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಕಾರಿಗೆ ಟ್ರಕ್ ಗುದ್ದಿರುವ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು, 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ 4 ಮಂದಿಯನ್ನು ಗುಡಮಲಾನಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ವೇಳೆ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕುರಿತು ಮಾಹಿತಿ ಪಡೆದ ಗುಡಮಲಾನಿ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.