ನ್ಯೂಸ್

ಬಿಎಸ್‌ವೈ ಬೆಂಗಾವಲು ವಾಹನ ಪಲ್ಟಿ- ಇಬ್ಬರಿಗೆ ಗಾಯ

ಚಿಕ್ಕಮಗಳೂರು: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಬೆಂಗಾವಲು ವಾಹನ ಪಲ್ಟಿಯಾಗಿ ಇಬ್ಬರು ಸಿಬ್ಬಂದಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ಇಂದು ನಡೆದಿದೆ.

ಮಂಗಳೂರಿನಿಂದ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಮಧ್ಯಾಹ್ನ 1 ಗಂಟೆ ಹೊತ್ತಿನಲ್ಲಿ ಅವಘಡ ಸಂಭವಿಸಿದೆ. ಶರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಯಡಿಯೂರಪ್ಪ ಅವರು ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸುವ ಸಲುವಾಗಿ ಮಂಗಳೂರಿಗೆ ಭೇಟಿ ನೀಡಿದ್ದರು. ಅವರ ಬೆಂಗಾವಲು ವಾಹನದ ಸಿಬ್ಬಂದಿ ಕಾರ್ಯ ಮುಗಿಸಿ ವಾಪಸ್ ಬರುವಾಗ ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಬಳಿ ಈ ಘಟನೆ ಸಂಭವಿಸಿದೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಇದು ನಡೆದಿದೆ.

ಜೀಪ್ ಪಲ್ಟಿಯಾಗಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ವಾಹನ ಚಲಿಸುವಾಗ ಜೀಪ್ ಬ್ರೇಕ್ ಜಾಮ್ ಆಗಿದ್ದೇ ವಾಹನ ಪಲ್ಟಿಯಾಗಲು ಕಾರಣವಾಗಿದೆ. ಬ್ರೇಕ್ ಜಾಮ್ ಆಗುತ್ತಿದ್ದಂತೆ, ವಾಹನದ ಟೈರ್ ಸ್ಫೋಟಗೊಂಡು ಪಲ್ಟಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ.