ನ್ಯೂಸ್

ಸಂಚಲನ ಮೂಡಿಸಿರೋ ‘ಬಿಕಿನಿ ವೈದ್ಯೆ’- ಟೀಕಾಕಾರಿಗೆ ಏನನ್ನುತ್ತಾರೆ ನೋಡಿ...

ಹವಾಯಿ: ಇತ್ತೀಚಿಗೆ ಒಳ ಉಡುಪು ಧರಿಸಿ ಕೋವಿಡ್‌ ಆಸ್ಪತ್ರೆಯಲ್ಲಿದ್ದ ನರ್ಸ್‌ ಒಬ್ಬಳು ಭಾರಿ ಸಂಚಲನ ಸೃಷ್ಟಿಸಿದ್ದಳು. ಅದರ ಬೆನ್ನಲ್ಲೇ ಇದೀಗ ವೈದ್ಯೆಯೊಬ್ಬರು ಬಿಕಿನಿ ಧರಿಸಿ ಟ್ರೀಟ್‌ಮೆಂಟ್‌ ಕೊಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹವಾಯಿ ದ್ವೀಪದ ಡಾ. ಕ್ಯಾಂಡೀಸ್ ಮೈಹರೆ ಎಂಬುವವರು, ತಾನು ಬಿಕಿನಿ ಧರಿಸಿಯೇ ಟ್ರೀಟ್‌ಮೆಂಟ್‌ ಕೊಡುತ್ತಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ವೈಜ್ಞಾನಿಕ ಪ್ರಕಾಶನವೊಂದು ಮದ್ಯ ಸೇವನೆ ಹಾಗೂ ಬಿಕಿನಿ ಧರಿಸುವುದು ವೈದ್ಯರಿಗೆ ಶೋಭೆ ನೀಡುವುದಿಲ್ಲ ಎಂದು ಹೇಳಿತ್ತು. ಅದಕ್ಕೆ ಉತ್ತರವಾಗಿ ಅವರು ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದರು.

ಇದು ಸಾಕಷ್ಟು ವೈರಲ್‌ ಆಗಿದ್ದು ಮೂರು ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಹಿಳೆಯರೂ ಸೇರಿದಂತೆ ಅನೇಕ ಮಂದಿ ಇದರ ಪರವಾಗಿಯೂ ಇದ್ದಾರೆ.

ಅಷ್ಟಕ್ಕೂ ಈ ವೈದ್ಯೆ ಹವಾಯಿಯಲ್ಲಿ ಪ್ರಸಿದ್ಧೆ ವೈದ್ಯೆಯಾಗಿದ್ದು, ಉತ್ತಮ ಚಿಕಿತ್ಸೆಗೆ ಹೆಸರಾಗಿದ್ದಾರೆ. ಇವರು ಕ್ಯಾಂಡೀಸ್‌ ಸಮುದ್ರದದ ತಟದಲ್ಲಿ ಬೋಟ್ ತಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಾರೆ. ಬೀಚ್ ಬಳಿ ಡ್ಯೂಟಿ ಇರುವುದರಿಂದ ಅವರು ಬಿಕಿನಿ ಧರಿಸಿಕೊಂಡೇ ಇರುತ್ತಾರೆ. ಇದನ್ನು ಅನೇಕ ವರ್ಷಗಳಿಂದ ಅವರು ನಡೆಸಿಕೊಂಡು ಬಂದಿದ್ದಾರೆ.

ಆದರೆ ಇದೀಗ ಬಿಕಿನಿ ಧರಿಸಿರುವ ಫೋಟೋ ವೈರಲ್‌ ಆಗಿರುವುದು ಇಷ್ಟೆಲ್ಲಾ ಸಂಚಲನ ಮೂಡಿಸಿದೆ. ಅನೇಕ ಮಂದಿ ಇದು ವೃತ್ತಿಪರ ವರ್ತನೆಯಲ್ಲ, ವೈದ್ಯ ವೃತ್ತಿಗೆ ಮಾಡುವ ಅವಮಾನ ಎಂದು ಕೆಲವರು ದೂರಿದ್ದರೆ, ಅಲ್ಲಿಯೇ ಇರುವ ಪುರುಷರ ಮನಸ್ಸು ಚಂಚಲವಾಗಿ ಅವರು ವೃತ್ತಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅನೇಕ ಮಂದಿ ಕಮೆಂಟ್‌ ಮಾಡಿದ್ದಾರೆ.

ಅದಕ್ಕೆ ತಿರುಗೇಟು ನೀಡಿರುವ ಕ್ಯಾಂಡೀಸ್‌, ಸಮುದ್ರದಲ್ಲಿ ಚಿಕಿತ್ಸೆ ನೀಡುವಾಗ ಸ್ವಿಮ್ಮಿಂಗ್‌ ಡ್ರೆಸ್‌ ಹಾಕದೇ ಇನ್ನೇನು ಹಾಕಬೇಕು? ಯಾರದ್ದೇ ಪ್ರಾಣಕ್ಕೆ ಅಪಾಯವಾದರೆ ಕೂಡಲೇ ರಕ್ಷಣೆಗೆ ಧಾವಿಸುವುದು ನನ್ನ ಕೆಲಸ. ನನ್ನಿಂದ ಚಿಕಿತ್ಸೆ ಪಡೆದಿರುವ ನೂರಾರು ಮಂದಿ ಗುಣಮುಖರಾಗಿದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲದಿರುವಾಗ ನಿಮಗೇಕೆ ಸಮಸ್ಯೆ ಎಂದು ಕೇಳಿದ್ದಾರೆ.

ತಮ್ಮ ವೃತ್ತಿ ಬದುಕಿನಲ್ಲಿ ಅನೇಕ ಗಂಭೀರವಾದ ಕೇಸ್‌ಗಳನ್ನು ನೋಡಿ, ಚಿಕಿತ್ಸೆ ನೀಡಿದ್ದೇನೆ ಎನ್ನುತ್ತಾರೆ ಈ ವೈದ್ಯೆ. ವೃತ್ತಿ ಹಾಗೂ ತಾವು ಧರಿಸುವ ಬಟ್ಟೆಗೆ ಯಾವುದೇ ಸಂಬಂಧವಿಲ್ಲ. ಯಾರಿಗಾದರೂ ತಾನು ಧರಿಸುವ ಬಟ್ಟೆಯಿಂದ ಸಮಸ್ಯೆ ಇದೆ ಎಂದಾದರೆ ಅವರು ಮೊದಲು ಮಾನಸಿಕ ಚಿಕಿತ್ಸೆ ಪಡೆದುಕೊಳ್ಳಲಿ. ಮಹಿಳಾ ವೈದ್ಯರು ತಮಗಿಷ್ಟವಾದ ಬಟ್ಟೆಯನ್ನು ಧರಿಸಬಹುದು ಎಂದು ಅವರು ಹೇಳಿದ್ದಾರೆ.

ಇದಕ್ಕೆ ಅನೇಕ ಮಹಿಳೆಯರು ಭೇಷ್‌ ಎಂದಿದ್ದು ಮಾತ್ರವಲ್ಲದೇ ಇದನ್ನು ಬೆಂಬಲಿಸಿ #MedBikini ಟ್ರೆಂಡ್ ಶುರು ಮಾಡಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ಇವರಂತೆಯೇ ಬಿಕನಿ ಧರಿಸಿ ಚಿಕಿತ್ಸೆ ನೀಡುತ್ತಿರುವ ಹಲವಾರು ಮಂದಿ ತಮ್ಮ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.