ನ್ಯೂಸ್

ಕಿಡ್ನಾಪರ್​ಗೆ ಕಾನೂನು ಸಚಿವ ಸ್ಥಾನ? ಸಂಕಷ್ಟದಲ್ಲಿ ನಿತೀಶ್​ ಸರ್ಕಾರ! ಅಧಿಕಾರ ಸ್ವೀಕಾರದ ಬೆನ್ನಲ್ಲೇ ರಾಜೀನಾಮೆ

ಪಟ್ನಾ: ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ, ಕಾಂಗ್ರೆಸ್ ಹಾಗೂ ಇತರ ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ನಿತೀಶ್​ ಕುಮಾರ್​ ಸರ್ಕಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ 23 ಸಚಿವರ ಪೈಕಿ 17 ಮಂದಿಯ ಮೇಲೆ ಕ್ರಿಮಿನಲ್​ ಕೇಸ್​ ಇರುವುದಾಗಿ ಈಚೆಗಷ್ಟೇ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮಾಹಿತಿ ನೀಡಿತ್ತು.

ಇದೇ ಆಗಸ್ಟ್​ 16ರಂದು ಹೊಸ ಸರ್ಕಾರದ ರಚನೆಯಾಗುತ್ತಿದ್ದಂತೆಯೇ ಇಂಥದ್ದೊಂದು ಶಾಕಿಂಗ್​ ವರದಿ ಹೊರಬಿದ್ದಿತ್ತು. 31 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಆರ್​ಜೆಡಿಯ 16, ಜೆಡಿಯುನ 11 ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಉಳಿದಂತೆ ಕಾಂಗ್ರೆಸ್​​ನ ಇಬ್ಬರು ಹಾಗೂ ಹಿಂದೂಸ್ತಾನ ಅವಾನಿ ಮೋರ್ಚಾದ ಓರ್ವ ಶಾಸಕನಿಗೆ ಸಚಿವರಾಗಿದ್ದಾರೆ. ಹೊಸ ಸರ್ಕಾರ ರಚನೆಯಾಗಿ ಎರಡು ವಾರ ಕಳೆಯುವಷ್ಟರಲ್ಲಿಯೇ ಮುಖ್ಯಮಂತ್ರಿ ನಿತೀಶ್​ ಕುಮಾರ್​ಗೆ ಇನ್ನೊಂದು ಶಾಕ್​ ಎದುರಾಗಿದೆ.

ಕಬ್ಬು ಕೈಗಾರಿಕಾ ಸಚಿವ ಕಾರ್ತಿಕೇಯ ಸಿಂಗ್ ರಾಜೀನಾಮೆ ನೀಡಿದ್ದಾರೆ. 2014ರ ಅಪಹರಣ ಪ್ರಕರಣದಲ್ಲಿ ಕಾರ್ತಿಕೇಯ ಸಿಂಗ್ ವಿರುದ್ಧ ನ್ಯಾಯಾಲಯ ವಾರೆಂಟ್​ ಹೊರಡಿಸಿತ್ತು. ಅಂದಿನಿಂದ ಅವರು ವಿವಾದದಲ್ಲಿ ಸಿಲುಕಿದ್ದರು. ಇದರ ಬೆನ್ನಲ್ಲೇ ಈಗ ರಾಜೀನಾಮೆ ನೀಡಿದ್ದಾರೆ. ಆಗಸ್ಟ್ 16 ರಂದು ನ್ಯಾಯಾಲಯದಲ್ಲಿ ಆರ್‌ಜೆಡಿ ಶಾಸಕ ಕಾರ್ತಿಕೇಯ ಸಿಂಗ್​ಗೆ ಶರಣಾಗುವಂತೆ ವಾರೆಂಟ್ ಹೊರಡಿಸಲಾಗಿತ್ತು. ಆದರೆ ಅವರು ನ್ಯಾಯಾಲಯಕ್ಕೆ ಶರಣಾಗಿರಲಿಲ್ಲ. ಬದಲಿಗೆ ಅದೇ ದಿನ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಕಾರ್ತಿಕೇಯ ಸಿಂಗ್ ಅವರಿಗೆ ಮೊದಲು ಕಾನೂನು ಸಚಿವರನ್ನಾಗಿ ಮಾಡಲಾಗಿತ್ತು. ಕ್ರಿಮಿನಲ್ ಒಬ್ಬರಿಗೆ ಕಾನೂನು ಸಚಿವ ಸ್ಥಾನ ನೀಡಲಾಗಿದೆ ಎಂದು ಬಿಜೆಪಿ ನಿರಂತರವಾಗಿ ಟೀಕೆ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಬುಧವಾರ (ಆ.31) ಬೆಳಗ್ಗೆ ಕಾರ್ತಿಕೇಯ ಸಿಂಗ್ ಅವರಿಂದ ಕಾನೂನು ಸಚಿವಾಲಯವನ್ನು ಹಿಂಪಡೆದು ಅವರನ್ನು ಕಬ್ಬು ಉದ್ಯಮ ಸಚಿವರನ್ನಾಗಿ ಮಾಡಿದರು, ಆದರೆ ಸಂಜೆಯಾಗುವಷ್ಟರಲ್ಲಿ ವೇಳೆಗೆ ಕಾರ್ತಿಕೇಯ ಸಿಂಗ್ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಕೂಡಲೇ ರಾಜೀನಾಮೆ ಅಂಗೀಕಾರ ಮಾಡಿದ್ದು, ತಮ್ಮ ಶಿಫಾರಸನ್ನು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಕಳುಹಿಸಿದ್ದಾರೆ. ಅಲ್ಲಿಯೂ ರಾಜೀನಾಮೆ ಕೂಡಲೇ ಅಂಗೀಕಾರವಾಗಿದೆ. 2014ರಲ್ಲಿ ಬಿಲ್ಡರ್​ ಒಬ್ಬರನ್ನು ಕೊಲೆ ಮಾಡುವ ಸಂಬಂಧ ಅಪಹರಿಸಿರುವ ಆರೋಪ ಇವರ ಮೇಲಿದೆ.

ಇಷ್ಟಾಗುತ್ತಿದ್ದಂತೆಯೇ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿ ಮೊದಲ ವಿಕೆಟ್ ಈಗಷ್ಟೇ ಬಿದ್ದಿದೆ. ಈಗ ಇನ್ನೂ ಹಲವು ವಿಕೆಟ್‌ಗಳು ಬೀಳಲಿವೆ ಎಂದಿದ್ದಾರೆ. (ಏಜೆನ್ಸೀಸ್​)