ಹೈದರಾಬಾದ್: ತೆಲುಗು ಬಿಸ್ ಬಾಸ್ ಸ್ಪರ್ಧಿ, ಪ್ರಸಿದ್ಧ ಯೂಟ್ಯೂಬರ್ ಹಾಗೂ ನಟಿಯಾಗಿರುವ ಸರಯು ರಾಯ್ ಅವರು ವಿವಾದವೊಂದರಲ್ಲಿ ಸಿಲುಕಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸರಯು ಮಾತ್ರವಲ್ಲದೇ ಅವರ ಬೆಂಬಲಿಗರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ.
ತಮ್ಮ ಯೂಟ್ಯೂಬ್‌ನಲ್ಲಿ ಸರಯು ಹಾಗೂ ಇವರ ಬೆಂಬಲಿಗರು ಕೇಸರಿ ಪಟ್ಟಿಯನ್ನು ತಲೆಗೆ ಕಟ್ಟಿಕೊಂಡು, ಗಣಪತಿ ಬಪ್ಪ ಮೋರ್ಯಾ ಎಂದು ಹೇಳಿಕೊಂಡು ಮದ್ಯಪಾನ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದರು. ಮದ್ಯಪಾನ ಮಾಡುವ ಮೂಲಕ ಹಿಂದೂ ದೇವರಿಗೆ ಅವಹೇಳನ ಮಾಡಿರುವುದಾಗಿ ದೂರಿ ಇವರ ವಿರುದ್ಧ ಸಿರಿಸಿಲ್ಲ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಮುಖಂಡ ಚಪುರಿ ಅಶೋಕ್ ಸಿರಿಸಿಲ್ಲ ಅವರು ದೂರು ದಾಖಲು ಮಾಡಿದ್ದಾರೆ.
ಈ ದೂರಿನ ಆಧಾರದ ಮೇಲೆ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. 2021ರ ಫೆಬ್ರುವರಿ ತಿಂಗಳಿನಲ್ಲಿ ನಡೆದ ಘಟನೆ ಇದಾಗಿದೆ. '7 ಆರ್ಟ್ಸ್' ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿರುವ ಸರಯು ಇದರಲ್ಲಿ ವಯಸ್ಕರ ವಿಡಿಯೋಗಳನ್ನು ಸಹ ಪೋಸ್ಟ್ ಮಾಡುತ್ತಾರೆ. ಲೈಂಗಿಕತೆ ಕುರಿತ ಮಾಹಿತಿ ನೀಡುತ್ತಾರೆ. ಯೂಟ್ಯೂಬ್ ಪ್ರಚಾರಕ್ಕಾಗಿ ಗಣಪತಿ ಬಪ್ಪಾ ಮೋರ್ಯಾ ಎಂಬ ವಿಡಿಯೋ ಮಾಡಿದ್ದರು. ಅದರಲ್ಲಿ ಅವರು ಹಾಗೂ ಬೆಂಬಲಿಗರು ಕೇಸರಿ ಪಟ್ಟಿ ಕಟ್ಟಿಕೊಂಡು, ಮದ್ಯಪಾನ ಮಾಡುತ್ತಾ ಗಣಪತಿ ಬಪ್ಪಾ ಮೋರ್ಯಾ ಎಂದಿದ್ದು ಸಿರಿಸಿಲ್ಲ ಹಾಗೂ ಅನೇಕ ಮಂದಿಗೆ ಸಿಟ್ಟು ತರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸಿರಿಸಿಲ್ಲದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಇದೀಗ ಎಲ್ಲರನ್ನೂ ಬಂಧಿಸಲಾಗಿದೆ. ಆದರೆ ತಮ್ಮನ್ನು ಬಂಧಿಸಿಲ್ಲ, ಸುಮ್ಮನೇ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಸರಯು ಸ್ಪಷ್ಟನೆ ಕೊಟ್ಟಿದ್ದಾರೆ.