ನ್ಯೂಸ್

ಜೀವಂತವಾಗಿ ಹೂತುಹಾಕಿದರೂ ಪವಾಡಸದೃಶವಾಗಿ ಬದುಕಿದ ಶಿಶು: ಚಿಕಿತ್ಸೆ ಕೊಡಿಸಿದ ರೈತ

ಗಂಬೋಯಿ (ಗುಜರಾತ್​): ಮನುಷ್ಯತ್ವವನ್ನೇ ಕಳೆದುಕೊಂಡು ಹೀನ ಕೃತ್ಯಗಳನ್ನು ಮಾಡುತ್ತಿರುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಅಮಾನವೀಯ ಘಟನೆ ಗುಜರಾತ್​ನ ಸಬರಕಾಂತ್​ನ ಗಂಬೋಯಿ ಗ್ರಾಮದಲ್ಲಿ ನಡೆದಿದೆ. ಯಾರೋ ಜೀವಂತವಾಗಿಯೇ ಶಿಶುವನ್ನು ಹೂತುಹೋಗಿದ್ದಾರೆ!

ರೈತ ಹೀತೇಂದ್ರ ಸಿನ್ಹಾ ಎಂಬುವವರು ತಮ್ಮ ಹೊಲಕ್ಕೆ ಹೋದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಅವರ ಹೊಲದಲ್ಲಿ ಯಾರೋ ಶಿಶು ಹೂತು ಹಾಕಿ ಹೋಗಿದ್ದರು. ಅವಸರದಲ್ಲಿ ಹೂತು ಹಾಕಿದ್ದರಿಂದ ಮಗುವಿನ ಕೈ ಮೇಲೆ ಕಾಣಿಸುತ್ತಿತ್ತು. ಇದನ್ನು ನೋಡಿ ಗಾಬರಿಯೊಂದ ಹೀತೇಂದ್ರ ಅವರು ಆ ಜಾಗವನ್ನು ಅಗೆದು ನೋಡಿದ್ದಾರೆ. ಪವಾಡಸದೃಶವೆಂಬಂತೆ ಮಗು ಇನ್ನೂ ಉಸಿರಾಡುತ್ತಿತ್ತು.

ಕೂಡಲೇ ಅವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ಅವರು ತಮ್ಮ ಅನುಭವ ಹಂಚಿಕೊಂಡರು, ಬೆಳಗ್ಗೆ ಹೊಲ ನೋಡಲೆಂದು ನಾನು ಹೋಗಿದ್ದೆ. ಆಗ ಮಣ್ಣಿನಲ್ಲಿ ಶಿಶುವಿನ ಕೈ ಭಾಗ ಮಾತ್ರ ಕಾಣಿಸಿತು. ನಮ್ಮ ಜಮೀನಿನ ಪಕ್ಕದಲ್ಲಿರುವ ವಿದ್ಯುತ್ ಪೂರೈಕೆ ಕಚೇರಿಯ ಸಿಬ್ಬಂದಿಯ ನೆರವಿನಿಂದ ಶಿಶುವನ್ನು ಹೊರಕ್ಕೆ ತೆಗೆದೆ. ಶಿಶುವನ್ನು ತುಂಬಾ ಆಳದಲ್ಲಿ ಹೂತಿರಲಿಲ್ಲ. ಆದ್ದರಿಂದ ಇನ್ನೂ ಉಸಿರಾಡುತ್ತಿತ್ತು ಎಂದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹೊಲದ ಮಾಲೀಕ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಲಾಗಿದೆ. ಶಿಶುವಿನ ತಾಯಿ ಮತ್ತು ಪೋಷಕರನ್ನು ಪತ್ತೆ ಹೆಚ್ಚಲು ಕ್ರಮ ವಹಿಸಲಾಗಿದೆ ಎಂದು ಎಸ್​ಐ ಸಿ.ಎಫ್​.ಠಾಕೂರ್​ ಹೇಳಿದ್ದಾರೆ (ಏಜೆನ್ಸೀಸ್​)