ಆರ್ಯನ್​ ಖಾನ್​, ಅನನ್ಯಾ ಪಾಂಡೆ 
ನ್ಯೂಸ್

ಡ್ರಗ್ಸ್​ ಕೇಸ್​ನಲ್ಲಿ ಕ್ಲೀನ್​ ಚಿಟ್​ ಪಡೆದ ಬೆನ್ನಲ್ಲೇ ನಾನು ಅದನ್ನು ಸೇವಿಸ್ತಿದ್ದೆ ಎಂದು ಹೇಳಿದ ಶಾರುಖ್​ ಪುತ್ರ

ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಕೊನೆಗೂ ಬಚಾವ್​ ಆಗಿದ್ದಾನೆ. ಕಳೆದ ಅಕ್ಟೋಬರ್​ 30ರಂದು ಹಡಗಿನಲ್ಲಿ ಪಾರ್ಟಿ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದ್ದ ಆರ್ಯನ್​ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್​​ಚಿಟ್​​ ನೀಡಿದ್ದು, ಈ ಸಮಯದಲ್ಲಿ ಆರ್ಯನ್​ ಖಾನ್​ ಬಳಿ ಡ್ರಗ್ಸ್​ ಇರುವುದಕ್ಕೆ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದಿದ್ದಾರೆ. ಆರ್ಯನ್ ಖಾನ್ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ರಿಕವರಿ ಮಾಡಲಾದ ವಸ್ತುಗಳಲ್ಲಿ ಡ್ರಗ್ಸ್ ಕಂಡು ಬಂದಿಲ್ಲ ಎಂದು ಚಾರ್ಜ್​ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 22 ದಿನ ಜೈಲು ಶಿಕ್ಷೆಯನ್ನು ಅನುಭವಿಸಿದ್ದ ಆರ್ಯನ್​ ಖಾನ್​ ಕೊನೆಗೂ ನೆಮ್ಮದಿಯಿಂದ ಉಸಿರುಬಿಡುವಂತಾಗಿದೆ.

ಈ ಮಧ್ಯೆಯೇ, ವಿಚಾರಣೆ ವೇಳೆ ಆರ್ಯನ್​ ಖಾನ್​, ತಾನು ಡ್ರಗ್ಸ್​ ಸೇವನೆ ಮಾಡುತ್ತಿದ್ದುದು ನಿಜ ಎಂದು ಒಪ್ಪಿಕೊಂಡಿದ್ದಾನೆ. ಅಮೆರಿಕದಲ್ಲಿ ಪದವಿ ಕಲಿಯುತ್ತಿದ್ದ ವೇಳೆ ತಾನು ಗಾಂಜಾ ಸೇವಿಸುತ್ತಿದ್ದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂದೆ ಹೇಳಿಕೆ ನೀಡಿದ್ದಾರೆ. ತನಗೆ ಆ ಸಮಯದಲ್ಲಿ ನಿದ್ದೆ ಬರುತ್ತಿರಲಿಲ್ಲ. ಇಂಟರ್​ನೆಟ್​ನಲ್ಲಿ ಈ ಬಗ್ಗೆ ಹುಡುಕಿದಾಗ ಗಾಂಜಾ ಸೇವನೆ ಮಾಡಬೇಕು ಎಂಬ ಮಾಹಿತಿ ಸಿಕ್ಕಿತು. ಅದಕ್ಕಾಗಿ ನಾನು ಸೇವಿಸುತ್ತಿದ್ದೆ ಎಂದು ಹೇಳಿದ್ದಾನೆ.

ಆರ್ಯನ್ ಖಾನ್​ ತನ್ನ ಸ್ನೇಹಿತೆ ಅನನ್ಯ ಪಾಂಡೆಯ ಜತೆ ಪಾರ್ಟಿಗೂ ಮೊದಲು ಕೊಕೇನ್ ಪ್ಲ್ಯಾನ್​ ಮಾಡಿದ್ದ ವಾಟ್ಸ್ಆ್ಯಪ್​ ಸಂದೇಶ ಸಿಕ್ಕಿತ್ತು. ಇದರ ಜತೆಗೆ ಗಾಂಜಾ ಬಗ್ಗೆಯೂ ಅದರಲ್ಲಿ ಉಲ್ಲೇಖ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿರುವ ಆರ್ಯನ್​, ಈ ಮೆಸೇಜ್​ ಮಾಡಿದ್ದು ನಾನೇ. ಆದರೆ ಅವೆಲ್ಲಾ ತಮಾಷೆಗೆ ಮಾಡಿರುವ ಮೆಸೇಜ್​ಗಳಷ್ಟೇ. ನಾವೇನೂ ಪಾರ್ಟಿಯಲ್ಲಿ ಡ್ರಗ್ಸ್​ ಸೇವನೆ ಮಾಡುತ್ತಿರಲಿಲ್ಲ ಎಂದಿದ್ದಾನೆ.

ಮುಂಬೈನಿಂದ ಒಬ್ಬ ಡೀಲರ್​ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದ ಬಗ್ಗೆ ಈ ಹಿಂದೆ ಆರ್ಯನ್​ ಬಾಯಿಬಿಟ್ಟಿದ್ದ. ಡ್ರಗ್ಸ್​ ಪೂರೈಕೆ ಮಾಡುತ್ತಿದ್ದುದು ನಿಜ. ಆದರೆ ಆತನ ಹೆಸರು ಹಾಗೂ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದ್ದಾನೆ. ಅದೇನೇ ಆದರೂ ಅಧಿಕಾರಿಗಳು ಇದೀಗ ಕ್ಲೀನ್​ಚಿಟ್​ ಕೊಟ್ಟಿದ್ದರಿಂದ ಶಾರುಖ್​ ಪುತ್ರ ನೆಮ್ಮದಿಯಿಂದ ಇದ್ದಾನೆ.