ನ್ಯೂಸ್

ಯೂಕ್ರೇನ್​ನಲ್ಲಿ ಎಂಬಿಬಿಎಸ್​ ಓದುತ್ತಿದ್ದ ಇನ್ನೋರ್ವ ಭಾರತೀಯನ ಸಾವು- ನಿಜಕ್ಕೂ ಅಲ್ಲಿ ಆಗಿದ್ದೇನು?

ಕೀವ್​: ಮಂಗಳವಾರದಂದು (ಮಾರ್ಚ್​ 1) ಹಾವೇರಿ ಮೂಲದ ನವೀನ್,​ ಖಾರ್ಕಿವ್​ನಲ್ಲಿ ರಷ್ಯಾದ ಬಾಂಬ್​ ದಾಳಿಗೆ ಬಲಿಯಾದ ಬೆನ್ನಲ್ಲೇ ಇನ್ನೋರ್ವ ಭಾರತೀಯ ಯೂಕ್ರೇನ್​ನಲ್ಲಿ ಮೃತಪಟ್ಟಿದ್ದಾನೆ.

ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್​ ಮಾಡುತ್ತಿದ್ದ ಪಂಜಾಬ್​​ ಮೂಲದ ಚಂದನ್ ಜಿಂದಾಲ್ ಎಂಬ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಆದರೆ ಈತನ ಸಾವಿಗೂ, ಯೂಕ್ರೇನ್​ನಲ್ಲಿ ನಡೆಯುತ್ತಿರುವ ದಾಳಿಗೂ ಸಂಬಂಧವಿಲ್ಲ ಎಂದು ಮೂಲಗಳು ಹೇಳಿವೆ.

ಚಂದನ್​ಗೆ ಇಸ್ಕೆಮಿಕ್ ಸ್ಟ್ರೋಕ್ ಆಗಿತ್ತು. ಇಸ್ಕೆಮಿಕ್ ಸ್ಟ್ರೋಕ್ ಎಂದರೆ ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಪಾರ್ಶ್ವವಾಯು​. ಚಿಕಿತ್ಸೆಗಾಗಿ ವಿನ್ನಿಟ್ಸಿಯಾದ ಆಸ್ಪತ್ರೆಯ ತುರ್ತುಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಯುವಕನ ಕುಟುಂಬಸ್ಥರಿಗೆ ಈಗಾಗಲೇ ವಿಷಯ ತಿಳಿಸಲಾಗಿದ್ದು, ಮಗನ ಮೃತದೇಹ ತರಲು ಸಹಾಯ ಮಾಡುವಂತೆ ಯುವಕನ ತಂದೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ.