ನ್ಯೂಸ್

'ದಿ ಕಶ್ಮೀರ್ ಫೈಲ್ಸ್' ಬಳಿಕ ಮತ್ತೊಂದು ಕರಾಳ ಅಧ್ಯಾಯದ ಸತ್ಯ ದರ್ಶನ! ನಿರ್ದೇಶಕ ಏನು ಹೇಳಿದ್ದಾರೆ ಕೇಳಿ...

ಮುಂಬೈ: ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಭಾರಿ ಕೋಲಾಹಲ ಸೃಷ್ಟಿಸಿರುವ ಚಿತ್ರ 'ದಿ ಕಶ್ಮೀರ್​ ಫೈಲ್ಸ್​'. 1990ರ ಕಾಶ್ಮೀರಿ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಆಗಿರುವ ಘೋರ ಅನ್ಯಾಯ, ಹತ್ಯಾಕಾಂಡದ ಸತ್ಯವನ್ನು, ಇಲ್ಲಿಯವರೆಗೆ ಜನರ ಮುಂದೆ ಬಾರದಿದ್ದ ನೈಜ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಈ ಚಿತ್ರ ಒಂದು ವರ್ಗವನ್ನಂತೂ ಅಕ್ಷರಶಃ ಬೆವರಿಳಿಸಿರುವುದು ನಿಜ. ಈ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದವರಿಗೆ ಕೊನೆಗೂ ಸೋಲುಂಟಾಗಿ ಜನಸಾಮಾನ್ಯರ ಮುಂದೆ ಭಯಾನಕ ಸತ್ಯವನ್ನು ಹೊರಗೆಡವಿದ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ.

'ದಿ ಕಶ್ಮೀರ್​ ಫೈಲ್ಸ್​' ಇಂದಿಗೂ ಕೆಲವರಿಗೆ ಸಹಿಸಿಕೊಳ್ಳಲು ಆಗದ ಚಿತ್ರ. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿ, ಜನರೂ ನೋಡುವಂತೆ ಮಾಡಿದರು. ಹೀಗಾಗಿ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಈ ಸಿನಿಮಾ ರಿಲೀಸ್ ಆಗಿ ಹಂಗಾಮಾ ಸೃಷ್ಟಿಸಿದೆ.

ಇದರಲ್ಲಿ ತೋರಿಸಿರುವ ಸತ್ಯವನ್ನು ಅರಗಿಸಿಕೊಳ್ಳಲು ಆಗದ ಒಂದು ವರ್ಗ ಇಂದಿಗೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಅದೆಷ್ಟರ ಮಟ್ಟಿಗೆ ಎಂದರೆ, ಸಿಂಗಪುರ ಸೇರಿದಂತೆ ಕೆಲ ದೇಶಗಳಲ್ಲಿ ಈ ಸಿನಿಮಾವನ್ನು ತಮ್ಮ ದೇಶದಲ್ಲಿ ರಿಲೀಸ್ ಮಾಡದಂತೆ ನಿರ್ಬಂಧ ಹೇರಿದವು. ಅಲ್ಲದೇ, ವಿವೇಕ್ ಅಗ್ನಿಹೋತ್ರಿ ಅವರ ಭಾಷಣಕ್ಕೂ ಅಡೆತಡೆ ಮಾಡಲಾಯಿತು. ಆದರೆ ಎಲ್ಲಾ ವಿರೋಧ, ವಿರೋಧಿಗಳನ್ನು ಹಿಮ್ಮೆಟ್ಟಿಸಿ ಬಾಕ್ಸ್​ ಆಫೀಸ್​ನಲ್ಲಿಯೇ ಧೂಳೆಬ್ಬಿಸಿರುವ ದಿ ಕಶ್ಮೀರಿ ಫೈಲ್ಸ್​ನ ಭಾಗ ಎರಡು ತೆರೆಯ ಮೇಲೆ ಬರಲಿದೆಯೇ ಎಂಬ ನಿರೀಕ್ಷೆಯಲ್ಲಿ ಹಲವರಿದ್ದಾರೆ. ಸಿನಿಮಾ ರಂಗದಲ್ಲಿನ ಅನೇಕ ದಾಖಲೆಗಳನ್ನು ಮುರಿದು ಭರ್ಜರಿ ಯಶಸ್ಸನ್ನು ಕಂಡ ಈ ಚಿತ್ರದ ಪಾರ್ಟ್​-2 ಯಾವಾಗ ಎಂದು ಜನರು ಪ್ರಶ್ನೆ ಕೇಳುತ್ತಿದ್ದಾರೆ.

ಅಂಥವರಿಗೆ ಇದೀಗ ಉತ್ತರಿಸಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಪಾರ್ಟ್​-2 ಬರಲಿದೆಯಾ ಎಂದ ಪ್ರಶ್ನೆಗೆ ಉತ್ತರಿಸಿರುವ ಅವರು, ಸದ್ಯ ದಿ ಡೆಲ್ಲಿ ಫೈಲ್ಸ್ ಸಿನಿಮಾ ಮಾಡುತ್ತಿದ್ದೇನೆ. ಇದರಲ್ಲಿಯೂ ಹತ್ಯಾಕಾಂಡವೇ ಪ್ರಧಾನ ಕಥೆಯಾಗಿ ಮೂಡಿ ಬರಲಿದೆ. ಇದೊಂದು ರೀತಿಯಲ್ಲಿ ದಿ ಕಶ್ಮೀರ್ ಫೈಲ್ಸ್​ನ ಮುಂದುವರೆದಿರುವ ಭಾಗವೇ ಅಂದುಕೊಳ್ಳಬಹುದು ಎಂದಿದ್ದಾರೆ.

ಇದರಿಂದಾಗಿ ಈ ಚಿತ್ರದಲ್ಲಿ ಏನಿರಬಹುದು ಎಂಬ ಕುತೂಹಲ ಹಲವರಲ್ಲಿ ಮನೆ ಮಾಡಿದ್ದರೆ, ಇದಕ್ಕಿನ್ನೆಷ್ಟು ಮಂದಿ ವಿರೋಧ ವ್ಯಕ್ತಪಡಿಸಬಹುದು ಎಂಬುದು ಕುತೂಹಲದ ವಿಷಯವೇ ಆಗಿದೆ.

ಅಂದಹಾಗೆ , ದಿಲ್ಲಿ ಫೈಲ್ಸ್ 1984 ರ ಕರಾಳ ದಿನಗಳನ್ನು ತೋರಿಸುತ್ತದೆ. ಇದು ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿದೆ. ಪಂಜಾಬ್‌ನಾದ್ಯಂತ ಉಗ್ರಗಾಮಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಮಾನವೀಯವಾಗಿದ್ದು ಅದನ್ನು ಇದರಲ್ಲಿ ಚಿತ್ರಿಸಲಾಗುತ್ತಿದೆ. ಪಂಜಾಬ್​ನಲ್ಲಿ ಕಾಂಗ್ರೆಸ್​ ವೋಟ್​​ಬ್ಯಾಂಕ್​ಗಾಗಿ ಹೇಗೆ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿತು, ಭಯೋತ್ಪಾದನೆಯನ್ನು ಹುಟ್ಟಿಸಿ ನಂತರ ನಿರ್ನಾಮ ಮಾಡಿದ್ದು ಹೇಗೆ? ಇದಾದ ನಂತರ ಅನೇಕ ಅಮಾಯಕರನ್ನು ಕೊಂದು ಸತ್ಯಾಂಶವನ್ನು ಹೇಗೆ ಮುಚ್ಚಿಡಲಾಯಿತು. ಇಲ್ಲಿಯವರೆಗೂ ನ್ಯಾಯ ಸಿಗದೇ ಪರದಾಡುತ್ತಿರುವವರ ಸ್ಥಿತಿ ಎಂಥದ್ದು ಎಂಬ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದು ವಿವೇಕ್​ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.