ಬೆಂಗಳೂರು: ಕನ್ನಡದ ಖ್ಯಾತ ನಟಿ ವಿನಯಾ ಪ್ರಕಾಶ್ ಅವರ ಮಗಳು, ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ನಟಿ ತೇಜಸ್ವಿನಿ ಪ್ರಕಾಶ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಬಾಲ್ಯದ ಸ್ನೇಹಿತ ಫಣಿ ವರ್ಮ ನದೀಮ್‌ಪಳ್ಳಿ ಅವರನ್ನು ತೇಜಸ್ವಿನಿ ವರಿಸಿದ್ದಾರೆ. ಇದೇ 20ರಂದು ಅವರ ಮದುವೆ ನಡೆದಿದ್ದು, ಇದೀಗ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
2008ರಲ್ಲಿ ತೆರೆಕಂಡ ದರ್ಶನ್ ಅಭಿನಯದ ಗಜ ಚಿತ್ರದ ಮೂಲಕ ಚಿತ್ರರಂಗಕ್ಕೆ ತೇಜಸ್ವಿನಿ ಪ್ರಕಾಶ್ ಪದಾರ್ಪಣೆ ಮಾಡಿದರು. ನಂತರ 2016ರಿಂದ 2017ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ನಿಹಾರಿಕಾ ಧಾರವಾಹಿಯಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸಿದರು. ರಾಬರ್ಟ್ ಚಿತ್ರದಲ್ಲಿ ಮತ್ತೂಮ್ಮೆ ದರ್ಶನ್ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಈ ಹಿಂದೆ ಅವರು ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ ಮೊದಲಾದ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದಾರೆ.
ಮದುವೆ ವಿಡಿಯೋ ಮತ್ತು ಫೋಟೋಗಳನ್ನು ನಟಿ ಕಾರುಣ್ಯ ರಾಮ್ ಮತ್ತು ತೇಜಸ್ವಿನಿ ಪ್ರಕಾಶ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ‘ಎರಡು ಹೃದಯಗಳು ಒಂದಾಗಿ ನಿಮ್ಮ ಭವಿಷ್ಯಕ್ಕಾಗಿ ಅತ್ಯುತ್ತಮವಾಗಿರಲಿ. ನಿಮ್ಮ ವಿವಾಹ ಜೀವನ ಸುಖಮಯವಾಗಿರಲಿ‘ ಎಂದು ನಟಿ ಕಾರುಣ್ಯ ಹಾರೈಸಿದ್ದಾರೆ.
ಮದುವೆಯ ದಿನ ಕೆಂಪು ಮತ್ತು ಗೋಲ್ಡನ್ ಬಣ್ಣದ ರೇಷ್ಮೆ ಸೀರೆಯಲ್ಲಿ ಮದುಮಗಳು ಮಿಂಚುತ್ತಿದ್ದರೆ, ಕ್ರೀಮ್ ಬಣ್ಣದ ರೇಷ್ಮೆ ಷರ್ಟ್, ಪಂಚೆಯಲ್ಲಿ ಮದುಮಗ ಮಿಂಚುತ್ತಿರುವುದನ್ನು ಫೋಟೋದಲ್ಲಿ ಆಣಿಸಬಹುದು.