ನ್ಯೂಸ್

ಶೂಟಿಂಗ್‌ ವೇಳೆ ಕುಸಿದುಬಿದ್ದ ನಟಿ ಶ್ವೇತಾ ಆಸ್ಪತ್ರೆಗೆ ದಾಖಲು-ಮಾಜಿ ಪತಿ ಟ್ವೀಟ್‌

ಮುಂಬೈ: ಬಾಲಿವುಡ್‌ ನಟಿ ಹಾಗೂ ಹಿಂದಿಯ ಖತರೋಂಕಿ ಖಿಲಾಡಿ ಸೀಸನ್ 11ರ ಸ್ಪರ್ಧಿಯಾಗಿರುವ ಶ್ವೇತಾ ತಿವಾರಿ ಶೂಟಿಂಗ್‌ ವೇಳೆ ಕುಸಿದುಬಿದ್ದುದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇವರು ಖತರೋಂಕಿ ಖಿಲಾಡಿಯ ಶೂಟಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ಕೇಪ್​​ಟೌನ್‌ಗೆ ತೆರಳಿದ್ದರು. ಅಲ್ಲಿಂದ ಮುಂಬೈಗೆ ವಾಪಸಾಗಿದ್ದರು. ಇದೇ ರಿಯಾಲಿಟಿ ಷೋ ಶೂಟಿಂಗ್‌ ಮುಂಬೈನಲ್ಲಿ ನಡೆಯುತ್ತಿದ್ದ ವೇಳೆ ಏಕಾಏಕಿಯಾಗಿ ಕುಸಿದುಬಿದ್ದಿದ್ದಾರೆ. ಅವರನ್ನು ಕೂಡಲೇ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೀರ್ಘ ಪ್ರಯಾಣ ಹಾಗೂ ಶೂಟಿಂಗ್‌ ಇದ್ದುದರಿಂದ ಅವರ ರಕ್ತದ ಒತ್ತಡ ಕುಸಿದ ಹಿನ್ನೆಲೆಯಲ್ಲಿ ಸುಸ್ತಾಗಿ ಈ ರೀತಿ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚು ಪ್ರಯಾಣ ಮಾಡಿದ ಕಾರಣ ಮತ್ತು ವಿಶ್ರಾಂತಿ ಇರದ ಕಾರಣದಿಂದ ಅವರಿಗೆ ಸಹಜವಾಗಿ ಆಯಾಸವಾಗಿದೆ ಎನ್ನಲಾಗಿದೆ.

ಆದರೆ ಇವರಿಗೆ ಇನ್ನಷ್ಟು ಅನಾರೋಗ್ಯ ಸಮಸ್ಯೆ ಇದ್ದುದರಿಂದ, ಅವರನ್ನು ಸದ್ಯ ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಕೇಪ್​​ಟೌನ್‌ನಿಂದ ಹಿಂದಿರುಗಿದ ಬಳಿಕ ಅವರು ದೆಹಲಿಯಲ್ಲಿ ಕಿರುಚಿತ್ರವೊಂದಕ್ಕೆ ಅಭಿನಯಿಸುತ್ತಿದ್ದರು. ತಮ್ಮ ಮಾಜಿ ಪತ್ನಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿನವ್ ಕೊಹ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಶ್ವೇತ ಅವರ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದಿದ್ದಾರೆ. ಈ ಕುರಿತು ಇನ್​​​ಸ್ಟಾಗ್ರಾಂದಲ್ಲಿ ಪೋಸ್ಟ್ ಮಾಡಿದ್ದಾರೆ.