ಮುಂಬೈ: ನಿನ್ನೆ ಅಂದರೆ ಡಿಸೆಂಬರ್ 12, ಹಿಂದಿ ಧಾರಾವಾಹಿಯ ಮೂಲಕ ಹಾಗೂ ಬಿಗ್ಬಾಸ್ 13ರ ವಿಜೇತರಾಗಿರುವ ಮನೆಮಾತಾಗಿರುವ ಪ್ರಸಿದ್ಧ ನಟ ಸಿದ್ಧಾರ್ಥ್ ಶುಕ್ಲಾ ಅವರ 40ನೇ ಹುಟ್ಟುಹಬ್ಬದ ಸಂಭ್ರಮ. ಕರೊನಾ ನಿಮಿತ್ತ ತಮ್ಮ ಅತ್ಯಂತ ಸಮೀಪದ ಸ್ನೇಹಿತರು ಹಾಗೂ ಬಂಧುಗಳಿಗಷ್ಟೇ ಆಹ್ವಾನ ನೀಡಿದ್ದರು ಸಿದ್ಧಾರ್ಥ್.
ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ತಮ್ಮ ಹುಟ್ಟುಹಬ್ಬದ ನಂತರ ತಾವು ಮನೆಗೆ ಹೋಗುತ್ತಿರುವ ದೃಶ್ಯವನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇ ಅವರಿಗೀಗ ಮುಳುವಾಗಿದೆ. ಏಕೆಂದರೆ ಹುಟ್ಟುಹಬ್ಬದ ಖುಷಿಯಲ್ಲಿ ಕಂಠಪೂರ್ತಿ ಕುಡಿದು ಟೈಟ್ ಆಗಿದ್ದ ಸಿದ್ಧಾರ್ಥ್ ವಿರುದ್ಧ ಈಗ ಅಮಾನಕರೊಬ್ಬರನ್ನು ಕಾರಿನಿಂದ ಗುದ್ದಿರುವ ಆರೋಪ ಕೇಳಿಬಂದಿದೆ.
ತಾವು ಮನೆಗೆ ಹೋಗುತ್ತಿದ್ದಾಗ ಕೆಲವು ಗೂಂಡಾಗಳು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಸಿದ್ಧಾರ್ಥ್ ಆರೋಪಿಸಿದ್ದು, ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದೀಗ ಸಕತ್ ವೈರಲ್ ಆಗಿದೆ.
ಅವರು ಈ ವಿಡಿಯೋ ಹಾಕಿರುವ ಉದ್ದೇಶ ತಮ್ಮ ಮೇಲೆ ಹಲ್ಲೆ ನಡೆದಿದೆ ಎನ್ನುವುದನ್ನು ತೋರಿಸಲು. ಆದರೆ ಆ ವಿಡಿಯೋದಲ್ಲಿ ಹುಡುಗನೊಬ್ಬ ನೀವು ಅಮಾಯಕರೊಬ್ಬರನ್ನು ಕುಡಿದ ಅಮಲಿನಲ್ಲಿ ಗುದ್ದಿದ್ದೀರಿ ಎಂದು ಹೇಳುವುದು ಕೇಳಿಸುತ್ತಿದೆ. ಅವರ ಜತೆ ಮಾತನಾಡುವಾಗ ಸಿದ್ಧಾರ್ಥ್ ಕುಡಿದಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
ನಂತರ, ಇದು ವೈರಲ್ ಆಗುತ್ತಿದ್ದಂತೆಯೇ, ಸಿದ್ಧಾರ್ಥ್ ಬೇರೆ ಕಥೆ ಹೇಳಿದ್ದಾರೆ. ನನಗೆ ಕೆಲವು ಗೂಂಡಾಗಳು ಚಾಕುವಿನಿಂದ ಬೆದಕಿಕೆ ಹಾಕಲು ಬಂದಿದ್ದರು. ಆದ್ದರಿಂದ ನಾನು ಫಾಸ್ಟ್ ಆಗಿ ಗಾಡಿ ಓಡಿಸಬೇಕಾಯಿತು ಎಂದಿದ್ದಾರೆ. ಒಟ್ಟಿನಲ್ಲಿ ಅಲ್ಲಿಗೆ ಜಗಳಕ್ಕೆ ಬಂದವರನ್ನು ಪೊಲೀಸರ ಬಳಿ ಯಶಸ್ವಿಯಾಗಿ ಕಳುಹಿಸಿಕೊಡಲಾಗಿದೆ ಎಂದು ಸಿದ್ಧಾರ್ಥ್ ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆಯೇ ಸಿದ್ಧಾರ್ಥ್ ಅವರ ಅಸಂಖ್ಯ ಅಭಿಮಾನಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.