ಮುಂಬೈ: ನಟಿಯರಷ್ಟೇ ಅಂಗಾಂಗ ತೋರಿಸುವುದ್ಯಾಕೆ? ನಾನೂ ಒಂದು ಹೆಜ್ಜೆ ಮುಂದೆ ಹೋಗುತ್ತೇನೆ ಎಂದು ಸಂಪೂರ್ಣವಾಗಿ ಬೆತ್ತಲಾ ಮ್ಯಾಗಜೀನ್ ಒಂದಕ್ಕೆ ಫೋಟೋ ಶೂಟ್ ಮಾಡಿಸಿಕೊಂಡು ಇದೀಗ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ ಬಾಲಿವುಡ್ ನಟ ರಣವೀರ್ ಸಿಂಗ್.
ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಕೆಲ ಸೆಲೆಬ್ರಿಟಿಗಳು ಸೇರಿ ಇವರ ಕೆಲ ಅಭಿಮಾನಿಗಳು ಇದಕ್ಕೆ ಹೊಗಳಿಕೆ ವ್ಯಕ್ತಪಡಿಸಿದ್ದರೆ, ಇದು ಹಲವು ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಇವರ ವಿರುದ್ಧ ಮುಂಬೈ ಪೊಲೀಸರಲ್ಲಿ ಕೇಸ್ ಕೂಡ ದಾಖಲಾಗಿದೆ.
ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ರಣವೀರ್ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 509, 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್ ಅಡಿಯಲ್ಲಿ ಮುಂಬೈನ ಚೆಂಬೂರ್ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ಕೇಸ್ನ ಹಿನ್ನೆಲೆಯಲ್ಲಿ ರಣವೀರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸತತ ಎರಡು ಗಂಟೆಗಳ ವರೆಗೆ ವಿಚಾರಣೆ ನಡೆಸಿದ್ದಾರೆ. ಈ ರೀತಿ ಫೋಟೋಶೂಟ್ ಮಾಡಿಸಿದೆ ಇಷ್ಟೆಲ್ಲಾ ಸಮಸ್ಯೆ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಇಲ್ಲದಿದ್ದರೆ ಹೀಗೆಲ್ಲಾ ಮಾಡುತ್ತಲೇ ಇರಲಿಲ್ಲ. ನಾನು ಬೆತ್ತಲಾಗಿರುವುದು ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗುತ್ತದೆ ಎಂದು ಊಹಿಸಿಯೂ ಇರಲಿಲ್ಲ ಎಂದಿದ್ದಾರೆ.
‘ನಾನು ವಿವಾದಾತ್ಮಕ ಫೋಟೋಗಳನ್ನು ಅಪ್ಲೋಡ್ ಮಾಡಿಲ್ಲ. ಆ ಫೋಟೋಗಳು ಆ ರೀತಿಯ ಸಮಸ್ಯೆ ತರುತ್ತದೆ ಎಂದು ನಾನು ಯೋಚಿಸಿರಲಿಲ್ಲ’ ಎಂದು ರಣವೀರ್ ಸಿಂಗ್ ಅವರು ಪೊಲೀಸರ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ರಣವೀರ್ಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ ಉಮೇರ್ ಸಂಧು ಅವರು ಹೇಳಿರುವ ಪ್ರಕಾರ, ರಣವೀರ್ ಸಿಂಗ್ ಅವರು ಮ್ಯಾಗಜಿನ್ ಮುಖಪುಟಕ್ಕಾಗಿ ಬೆತ್ತಲಾಗಲು ಬರೋಬ್ಬರಿ 55 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ತಿಳಿದುಬಂದಿದೆ. ತಮ್ಮ ಹಿಂದಿನ ಸಿನಿಮಾ 83 ಮತ್ತು ಜೊಯೆಶಾಭಾಯ್ ಜೋರ್ದಾರ್ ಸಿನಿಮಾಗಳ ಸಂಭಾವನೆಗಿಂತಲೂ ಅಧಿಕ ಎಂದು ಹೇಳಲಾಗಿದೆ. ಅಲ್ಲದೆ, 83 ಸಿನಿಮಾವನ್ನು ರಣವೀರ್ ತಮ್ಮದೇ ಬ್ಯಾನರ್ನಲ್ಲಿ ನಿರ್ಮಾಣ ಮಾಡಿದ್ದರು. ಆ ಸಿನಿಮಾದಿಂದ ನಷ್ಟವನ್ನು ಭರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)