ನವದೆಹಲಿ: ನನಗೂ ಒಳ್ಳೆಯ ಚಿಕಿತ್ಸೆ ದೊರೆತಿದ್ದರೆ ನಾನೂ ಬದುಕುತ್ತಿದ್ದೆ. ಈಗ ಯಾವ ಭರವಸೆಯೂ ಇಲ್ಲ. ಮತ್ತೆ ಹುಟ್ಟಿ ಬರುವೆ, ಒಳ್ಳೆಯ ಕೆಲಸ ಮಾಡುವೆ, ಇತಿ ನಿಮ್ಮ ರಾಹುಲ್ ವೊಹ್ರಾ… ಎಂದು ಪ್ರಖ್ಯಾತ ನಟ ರಾಹುಲ್ (35) ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡು ಸೋಮವಾರ (ಮೇ 10) ಕೊನೆಯುಸಿರೆಳೆದಿದ್ದರು.
ಇಂದು ರಾಹುಲ್ ಅವರ ಪತ್ನಿ ಜ್ಯೋತಿ ತಿವಾರಿ ಪತಿಯ ಕೊನೆಯ ಹೃದಯವಿದ್ರಾವಕ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ತಾವು ದಾಖಲಾಗಿರುವ ದೆಹಲಿಯ ರಾಜೀವಗಾಂಧಿ ಸೂಪರ್‌ಸ್ಟೆಷ್ಯಾಲಿಟಿ ಆಸ್ಪತ್ರೆಯಲ್ಲಿ ತಾವು ಅನುಭವಿಸುತ್ತಿರುವ ನೋವನ್ನು ವಿಡಿಯೋ ಮಾಡುವ ಮೂಲಕ ಹೇಳಿರುವ ರಾಹುಲ್, ಮೃತಪಟ್ಟಿದ್ದಾರೆ.
ಇದರ ವಿಡಿಯೋ ಹಂಚಿಕೊಂಡಿರುವ ಜ್ಯೋತಿ, ‘ನನ್ನ ರಾಹುಲ್ ಹೊರಟು ಹೋಗಿರುವುದು ಎಲ್ಲರಿಗೂ ತಿಳಿದಿದೆ, ಆದರೆ ಅವರು ಎಲ್ಲಿ ಹೋದರೋ ಗೊತ್ತಿಲ್ಲ. ಆದರೆ ಪ್ರತಿ ರಾಹುಲ್‌ಗೆ ನ್ಯಾಯ ಸಿಗಬೇಕು. ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಈ ರೀತಿ ಚಿಕಿತ್ಸೆ ನೀಡುತ್ತಾರೆ’ ಎಂದು ಹೇಳಿಕೊಂಡು ಪತಿಯ ವಿಡಿಯೋ ಶೇರ್ ಮಾಡಿದ್ದಾರೆ.
ಈ ವೀಡಿಯೋದಲ್ಲಿ ರಾಹುಲ್ ಆಕ್ಸಿಜನ್ ಮಾಸ್ಕ್ ಧರಿಸಿ ಉಸಿರಾಟಕ್ಕೆ ಪರದಾಡುವುದನ್ನು ಕಾಣಬಹುದು. ಆಸ್ಪತ್ರೆಯಲ್ಲಿನ ಚಿಕಿತ್ಸೆ ಹಾಗೂ ಸೇವೆಗಳ ಬಗ್ಗೆ ಹೇಳೀರುವ ಅವರು, ಪ್ರಸ್ತುತ ಈ ಆಕ್ಸಿಜನ್‌ಗೆ ದುಬಾರಿ ಬೆಲೆ ಇದೆ.ಇದು ಸಿಗದೇ ಅನೇಕ ರೋಗಿಗಳು ಬಳಲುತ್ತಿದ್ದಾರೆ. ಆದರೆ ನನಗೆ ಸಿಕ್ಕರೂ ಆಸ್ಪತ್ರೆಯಲ್ಲಿ ಸಹಾಯಕ್ಕಾಗಿ ಯಾರೂ ಬರುತ್ತಿಲ್ಲ. ನಾನು ಕರೆದರೆ ಒಂದು ನಿಮಿಷ ಎಂದು ಹೇಳುತ್ತಾರೆ ಮತ್ತು ಗಂಟೆಗಟ್ಟಲೆ ಇತ್ತ ಬರುವುದೇ ಇಲ್ಲ. ನಾನು ಅವರನ್ನು ಕರೆಯುತ್ತಲೇ ಇದ್ದರೂ ಬರುತ್ತಿಲ್ಲ. 1-2 ಗಂಟೆಗಳ ಬಳಿಕ ಬರುತ್ತಾರೆ. ಅಲ್ಲಿಯವರೆಗೂ ಆಕ್ಸಿಜನ್‍ನನ್ನು ನಾವೇ ನೋಡಿಕೊಳ್ಳಬೇಕಾಗುತ್ತದೆ. ಅವರಿಗೆ ಹೇಗೆ ಅರ್ಥ ಮಾಡಿಸಲಿ ಎಂದು ತಿಳಿಯುತ್ತಿಲ್ಲ’ ಎಂದಿದ್ದಾರೆ.
ಈ ವಿಡಿಯೋ ಮಾಡಿದ ಕೆಲವೇ ಗಂಟೆಗಳಲ್ಲಿ ರಾಹುಲ್ ಪ್ರಾಣಪಕ್ಷಿ ಹಾರಿಹೋಗಿದೆ.
ವಿಡಿಯೋ ಇಲ್ಲಿದೆ ನೋಡಿ...