ನ್ಯೂಸ್

ಶವಸಂಸ್ಕಾರಕ್ಕೆ ಹೊರಟ 18 ಮಂದಿ ದಾರಿಯಲ್ಲಿಯೇ ಹೆಣವಾದರು! ಭೀಕರ ಅಪಘಾತದಲ್ಲಿ ದಾರುಣ ಸಾವು

ಕೋಲ್ಕತಾ: ನಿಂತಿದ್ದ ಟ್ರಕ್‌ಗೆ ಮಿನಿಟ್ರಕ್‌ ಒಂದು ಡಿಕ್ಕಿಹೊಡೆದ ರಭಸಕ್ಕೆ ಟೆಂಪೋದಲ್ಲಿದ್ದ 18 ಮಂದಿ ಮೃತಪಟ್ಟಿರುವ ಭಯಾನಕ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಸ್ಖಾಲಿಯಲ್ಲಿ ನಡೆದಿದೆ. ಇವರಲ್ಲಿ ಆರು ಮಂದಿ ಮಹಿಳೆಯರು ಮತ್ತು ಒಂದು ಮಗು ಸೇರಿದೆ.

ಸುಮಾರು 35 ಜನರು ಶವಸಂಸ್ಕಾರಕ್ಕೆಂದು ಮಿನಿಟ್ರಕ್‌ನಲ್ಲಿ ಸಾಗುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿದೆ. ಈ ರಭಸಕ್ಕೆ ಅಲ್ಲಿಯೇ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ 11 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ.

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ 11 ಮಂದಿ ಮೃತಪಟ್ಟಿದ್ದು, ಒಟ್ಟೂ ಸಾವಿನ ಸಂಖ್ಯೆ 18 ಆಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಫುಲ್‌ಭರಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಸುಕಿನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿಪರೀತ ಇಬ್ಬನಿ ಬೀಳುತ್ತಿದ್ದ ಪರಿಣಾಮವಾಗಿ ಸರಿಯಾಗಿ ದಾರಿ ಕಾಣಿಸದೇ ಈ ಅನಾಹುತ ಸಂಭವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಈ ಭಯಾನಕ ದುರಂತಕ್ಕೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧಂಕರ್‌, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.