ನ್ಯೂಸ್

ಅನಿಲ್​ ಕಪೂರ್​ನಂತೆ ಚರಂಡಿಗೆ ಧುಮುಕಿದ ಆಪ್​ ಮುಖಂಡನಿಗೆ ಹಾಲಿನ ಅಭಿಷೇಕ!

ನವದೆಹಲಿ: ಪಂಜಾಬ್​ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್​ ಆದ್ಮಿ ಪಕ್ಷ (ಆಪ್​) ಇದೀಗ ದೆಹಲಿಯ ಪುರಸಭೆಯ ಚುನಾವಣೆ ಮೇಲೂ ಕಣ್ಣು ನೆಟ್ಟಿದೆ. ಮತದಾರರನ್ನು ಓಲೈಸಿಕೊಳ್ಳಲು ಹಲವಾರು ತಂತ್ರಗಳನ್ನು ರೂಪಿಸಲಾಗುತ್ತಿದೆ.

ಮತದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ಪೂರ್ವ ದೆಹಲಿಯ ಆಪ್​ ಮುಖಂಡ ಹಸೀಬ್ ಉಲ್ ಹಸನ್ ಶಾಸ್ತ್ರಿ ಪಾರ್ಕ್‌ನಲ್ಲಿ ತುಂಬಿ ಹರಿಯುವ ಚರಂಡಿಗೆ ಹಾರಿ, ಚರಂಡಿ ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ. ಬಿಜೆಪಿ ಆಡಳಿದಲ್ಲಿರುವ ಈ ಭಾಗದಲ್ಲಿ ಆಪ್​ನಿಂದ ಹೀಗೊಂದು ತಂತ್ರಗಾರಿಕೆ ನಡೆದಿದೆ.

ಇದಾದ ಬಳಿಕ ಆಪ್​ ಕಾರ್ಯಕರ್ತರು ಹಸನ್​ಗೆ ಹಾಲಿನ ಅಭಿಷೇಕ ನಡೆಸಿ ದೇಹ ಸ್ವಚ್ಛಗೊಳಿಸಿದರು. ಹಲವು ತಿಂಗಳಿನಿಂದ ಚರಂಡಿ ತುಂಬಿ ಹರಿಯುತ್ತಿದೆ. ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಬಿಜೆಪಿ ಕೌನ್ಸಿಲರ್ ಮತ್ತು ಸ್ಥಳೀಯ ಶಾಸಕರು ಸಹ ಕ್ಯಾರೆ ಎನ್ನುತ್ತಿಲ್ಲ. ಆದರಿಂದ ನಾನೇ ಖುದ್ದಾಗಿ ಚರಂಡಿಗಿಳಿದು ಸ್ಚಚ್ಛಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

‘ನಾಯಕ್’​ ಚಿತ್ರದಲ್ಲಿ ಅನಿಲ್​ ಕಪೂರ್ ಕೂಡ ಇದೇ ರೀತಿ ಚರಂಡಿ ಸ್ವಚ್ಛಗೊಳಿಸಿದಾಗ ಅವರ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದು, ಅದರಂತೆ ಇಲ್ಲಿಯೂ ಆಗಿದೆ. ಇದೇ ಕಾರಣಕ್ಕೆ ನಾಯಕ್​ ಚಿತ್ರದ ಹಾಲಿನ ಅಭಿಷೇಕ ಹಾಗೂ ಆಪ್​ ಮುಖಂಡನಿಗೆ ಮಾಡಿದ ಹಾಲಿನ ಅಭಿಷೇಕದ ಚಿತ್ರಗಳು ಜೋಡಿಸಿ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.