ನ್ಯೂಸ್

VIDEO: ಕ್ಷಣ ಕ್ಷಣವೂ ದೊಡ್ಡದಾಗುತ್ತಾ ಮನೆಗಳನ್ನು ನುಂಗಿಹಾಕ್ತಿದೆ ಭಯಾನಕ ಗುಂಡಿ: ಬೆಚ್ಚಿಬಿದ್ದ ಜನತೆ

ಪ್ಯೂಯೆಬ್ಲಾ (ಮೆಕ್ಸಿಕೋ): ಕೃಷಿ ಭೂಮಿಯಲ್ಲಿ ಬೃಹದಾಕಾರವಾಗಿ ಬಿದ್ದಿರುವ ಗುಂಡಿಯೊಂದು ಕ್ಷಣಕ್ಷಣಕ್ಕೂ ದೊಡ್ಡದಾಗುತ್ತಾ ಮನೆಗಳನ್ನೇ ನುಂಗಿಹಾಕುತ್ತಿರುವ ಘಟನೆ ಮಧ್ಯ ಮೆಕ್ಸಿಕೋದ ಗ್ರಾಮವೊಂದರಲ್ಲಿ ನಡೆಯುತ್ತಿದೆ. ಚಿಕ್ಕದಾಗಿದ್ದ ಈ ಗುಂಡಿನ ಬಗ್ಗೆ ಮೊದಲು ಜನರು ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ರಾತ್ರಿ ಬೆಳಗಾಗುವುದರೊಳಗೆ ಈ ಗುಂಡಿ ದೊಡ್ಡದಾಗಿದೆ, ಮಾತ್ರವಲ್ಲದೇ ಕ್ಷಣ ಕ್ಷಣಕ್ಕೂ ಕುಸಿದು ತನ್ನ ವಿಸ್ತಾರವನ್ನು ಹೆಚ್ಚಿಸುತ್ತಲೇ ಸಾಗಿದೆ. ಇದರಿಂದ ಜನರು ಬೆಚ್ಚಿಬಿದ್ದಿದ್ದಾರೆ.

ಈಗ ಸದ್ಯ ಸುಮಾರು 370 ಅಡಿ ಅಗಲ, 65 ಅಡಿಗಳಷ್ಟು ಆಳವಿರುವ ಗುಂಡಿಯಷ್ಟು ಅದು ಹರಡಿಕೊಂಡಿದ್ದು, ಸಮೀಪ ಇರುವ ಮನೆಗಳನ್ನು ನುಂಗಿ ಹಾಕುತ್ತಿವೆಯಂತೆ. ಈ ಬಗ್ಗೆ ಹಲವು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಆದರೆ ಕಾರಣ ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ. ಗುಂಡಿ ಸಮೀಪ ಯಾರೂ ಹೋಗಬೇಡಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸುತ್ತಮತ್ತಲಿನ ಮನೆಗಳನ್ನೂ ಖಾಲಿ ಮಾಡಿಸಲಾಗಿದೆ. ಸ್ಥಳದಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ.

ಇದರೊಳಗೆ ನೀರು ತುಂಬಿಕೊಂಡಿದೆ. ನೂರಾರು ಅಡಿ ಅಗಲ ಹಾಗೂ ಹತ್ತಾರು ಅಡಿ ಆಳವಿರುವ ಗುಂಡಿಯ ಒಳಭಾಗ ಸಂಪೂರ್ಣ ನೀರಿನಿಂದ ತುಂಬಿ ಹೋಗಿದೆ. ಅದೇ ಇನ್ನೊಂದೆಡೆ ಇದು ದೆವ್ವ, ಭೂತ ಇಲ್ಲವೇ ಏಲಿಯನ್‌ ಕಾಟ ಎನ್ನುತ್ತಿದ್ದಾರೆ ಜನತೆ. ಏಲಿಯನ್‌ಗಳ ಸ್ಪೇಸ್ ಕ್ರಾಫ್ಟ್ ಇದೇ ಜಾಗದಲ್ಲಿ ಬಿದ್ದಿದ್ದರಿಂದ ಗುಂಡಿ ಉಂಟಾಗಿದೆ ಎಂದರೆ, ಕೆಲವರು ಇದು ದುಷ್ಟ ಶಕ್ತಿ ಕಾಟ ಎನುತ್ತಿದ್ದಾರೆ. ಆದರೆ ಇಲ್ಲಿ ಕ್ಷುದ್ರಗ್ರಹ ಅಪ್ಪಳಿಸಿ ಹೀಗಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ ಕೆಲವು ತಜ್ಞರು. ಒಟ್ಟಿನಲ್ಲಿ ಈ ಬಗ್ಗೆ ಸಾಕಷ್ಟು ಅಧ್ಯಯನ ಶುರುವಾಗಿದೆ.