ತಿರುವನಂತಪುರ (ಕೇರಳ): ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ ಕೆಲ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ ಬಳಿಕ ಒಂದೊಂದೇ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಪಿಎಫ್‌ಐ ಜತೆಗೆ ಪೊಲೀಸ್ ಅಧಿಕಾರಿಗಳು ಕೂಡ ಸಂಪರ್ಕ ಹೊಂದಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.
ಕೇರಳ ಒಂದರಲ್ಲಿಯೇ ಕನಿಷ್ಠ 873 ಪೊಲೀಸ್ ಅಧಿಕಾರಿಗಳು ಪಿಎಫ್‌ಐ ಸಂಘಟನೆಯ ಜತೆ ಸಂಬಂಧ ಹೊಂದಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದ ವರದಿಯಲ್ಲಿ ಹೇಳಿದೆ. ಪಿಎಫ್‌ಐ ತವರು ಕೇರಳ ಆಗಿರುವ ಹಿನ್ನೆಲೆಯಲ್ಲಿ ಇಲ್ಲಿಯ ಪೊಲೀಸರೂ ಅವರ ಜತೆ ಶಾಮೀಲಾಗಿರುವುದಾಗಿ ಈ ವರದಿ ಹೇಳಿದೆ. ಇನ್ನು ಉಳಿದ ರಾಜ್ಯಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸ್ಪೆಷಲ್ ಬ್ರ್ಯಾಂಚ್, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರಿಗಳ ಜತೆ ಪಿಎಫ್‌ಐಗೆ ನಂಟಿತ್ತು ಎಂದು ಎನ್ಐಎ ಹೇಳಿದ್ದು, ಇದೀಗ ಸಬ್ ಇನ್ಸ್‌ಪೆಕ್ಟರ್, ಸ್ಟೇಷನ್ ಹೆಡ್ ಆಫೀಸ್ ಶ್ರೇಣಿ ಮತ್ತು ಸಿವಿಲ್ ಪೊಲೀಸರ ಮೇಲೆ ಕಣ್ಣಿಟ್ಟಿದೆ.
ಅಷ್ಟಕ್ಕೂ ಈ ಪೊಲೀಸ್ ಅಧಿಕಾರಿಗಳು ಹೇಗೆ ಶಾಮೀಲಾಗಿದ್ದರು ಎಂಬ ಬಗ್ಗೆಯೂ ಎನ್ಐಎ ತಿಳಿಸಿದೆ. ಪಿಎಫ್‌ಐ ಕುರಿತು ತನಿಖೆ ನಡೆಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಮಾಡುವ ಯೋಜನೆಗಳ ಕುರಿತು ಇವರೆಲ್ಲರೂ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಪಿಎಫ್‌ಐ ಮೇಲೆ ದಾಳಿಗೂ ಮೊದಲೇ ಅವರು ಎಸ್ಕೇಪ್ ಆಗುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.
ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ವಿವರವನ್ನು ಪಿಎಫ್‌ಐಗೆ ಸೋರಿಕೆ ಮಾಡಿದ ಹಿನ್ನೆಲೆಯಲ್ಲಿ ಇಡುಕ್ಕಿಯ ತೊಡುಪುಳದ ಸಿವಿಲ್ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಲಾಗಿತ್ತು. ಇದೇ ರೀತಿಯ ಆರೋಪದ ಹಿನ್ನೆಲೆಯಲ್ಲಿ ಮುನ್ನಾರ್ ಪೊಲೀಸ್ ಠಾಣೆಯ ಎಸ್‌ಐ ಸೇರಿದಂತೆ ಮೂವರನ್ನು ವರ್ಗಾವಣೆ ಮಾಡಲಾಗಿತ್ತು. (ಏಜೆನ್ಸೀಸ್)